
ಜಾನ್ ಪುರ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮ, ಜಾತಿ ಆಧಾರದ ಮೇಲೆ ನಡೆಯುತ್ತಿರುವ ಘಟನೆಗಳು ಮುಂದಿನ ಪೀಳಿಗೆಯ ಮೇಲೆ ಭಯ ಹುಟ್ಟಿಸುವಂತಿದೆ. ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ಮುಸ್ಲಿಂ ಎನ್ನುವ ಕಾರಣದಿಂದ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ನಂತರ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ವಿವಾದ ಭುಗಿಲೆದ್ದಿದೆ.
ಏನಿದು ವಿವಾದ: ಅಂದಹಾಗೆ ಬಿರಿಬರಿ ಗ್ರಾಮದ ನಿವಾಸಿ ಶಮಾ ಪರ್ವೀನ್ ಎಂಬ ಮಹಿಳೆಯನ್ನು ಹೆರಿಗೆಗಾಗಿ ಸೆಪ್ಟೆಂಬರ್ 30 ರಂದು ರಾತ್ರಿ 9.30 ರ ಸುಮಾರಿಗೆ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆತರಲಾಗಿತ್ತು. ಆ ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆಯೊಬ್ಬರು ಆಕೆಯನ್ನು ಪರೀಕ್ಷಿಸಿದ್ದಾರೆ. ಅಕ್ಟೋಬರ್ 1 ರಂದು, ಕರ್ತವ್ಯದಲ್ಲಿದ್ದ ವೈದ್ಯರು, ಮುಸ್ಲಿಂ ಮಹಿಳೆಗೆ ಚಿಕಿತ್ಸೆ ನೀಡುವುದಿಲ್ಲ ಹೇಳಿದ್ದಾಗಿ ಶಮಾ ಪರ್ವೀನ್ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
ನಿನ್ನ ಹೆರಿಗೆ ಮಾಡುವುದಿಲ್ಲ, ಆಪರೇಷನ್ ಥಿಯೇಟರ್ ನಿಂದ ಆಕೆಯನ್ನು ಕರೆದುಕೊಂಡು ಹೋಗಿ ಎಂದು ನರ್ಸ್ ಗೆ ನಿರ್ದೇಶಿಸಿದ್ದಾರೆ. ಅಲ್ಲದೇ ಬೇರೆ ಎಲ್ಲಾದರೂ ಕರದುಕೊಂಡು ಹೋಗಿ ಎಂದು ಕುಟುಂಬದ ಸದಸ್ಯರಿಗೆ ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಆರೋಪ ನಿರಾಕರಿಸಿದ ವೈದ್ಯಕೀಯ ಅಧೀಕ್ಷಕ
ಈ ಆರೋಪ ಕೇಳಿ ಅಚ್ಚರಿಗೊಂಡ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಗುಪ್ತಾ, ಸಂಬಂಧಿಸಿದ ವೈದ್ಯರಿಂದ ವಿವರಣೆಯನ್ನು ಕೇಳಿದ್ದಾರೆ. ಧರ್ಮದ ಆಧಾರದ ಮೇಲಿನ ಈ ಆರೋಪವನ್ನು ನಿರಾಕರಿಸಿದ್ದು, ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಇಬ್ಬರು ಪತ್ರಕರ್ತರ ವಿರುದ್ಧ ಎಫ್ ಐಆರ್
ಈ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹರಿಯಬಿಟ್ಟ ಇಬ್ಬರು ಸ್ಥಳೀಯ ಪತ್ರಕರ್ತರಾದ ಮಯಾಂಕ್ ಶ್ರೀವಾಸ್ತವ ಮತ್ತು ಮೊಹಮ್ಮದ್ ಉಸ್ಮಾನ್ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಇಬ್ಬರು ಪತ್ರಕರ್ತರು ಬಲವಂತವಾಗಿ ಹೆರಿಗೆ ರೂಮ್‌ಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡಿ ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ವೈದ್ಯಕೀಯ ಅಧೀಕ್ಷರು ದೂರು ದಾಖಲಿಸಿದ್ದಾರೆ. ಈ ಘಟನೆ ರಾಜಕೀಯವಾಗಿಯೂ ಬಿರುಗಾಳಿ ಎಬ್ಬಿಸಿದೆ.
ರಾಜಕೀಯ ನಾಯಕರ ಆಕ್ರೋಶ: ಮಚ್ಲಿಶಹರ್‌ನ ಸಮಾಜವಾದಿ ಪಕ್ಷದ ಶಾಸಕಿ ರಾಗಿಣಿ ಸೋಂಕರ್, ಪ್ರಕರಣವನ್ನು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವ ಬದಲು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಕಾರ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ವಿಕೇಶ್ ಉಪಾಧ್ಯಾಯ ವಿಕ್ಕಿ, "ಸಮಾಜದ ಎಲ್ಲಾ ವರ್ಗಗಳ ಸೇವೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ ವೈದ್ಯರು ಧರ್ಮದ ಆಧಾರದ ಮೇಲೆ ಚಿಕಿತ್ಸೆ ನಿರಾಕರಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ವಕ್ತಾರ ಅವ್ನಿಶ್ ತ್ಯಾಗಿ, ಪ್ರತಿಪಕ್ಷದ ಹೇಳಿಕೆಗಳನ್ನು ಆಧಾರರಹಿತವೆಂದು ತಳ್ಳಿಹಾಕಿದ್ದಾರೆ.
Advertisement