
ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಬೆಂಗಳೂರು ಪೊಲೀಸರು ಬುಧವಾರ ಶೂನ್ಯ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಪಾದಿತ ಅಪರಾಧ ಎಲ್ಲೇ ನಡೆದಿದ್ದರೂ, ಎಲ್ಲಿ ಬೇಕಾದರೂ ಶೂನ್ಯ ಎಫ್ಐಆರ್ ದಾಖಲಿಸಬಹುದು.
ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವಾಚಲ ಅವರು ನೀಡಿದ ದೂರಿನ ಆಧಾರದ ಮೇಲೆ, ವಕೀಲ ರಾಕೇಶ್ ಕಿಶೋರ್ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 132(ಸಾರ್ವಜನಿಕ ಸೇವಕ ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 133 (ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಕೇಶ್ ಕಿಶೋರ್ ಅವರ ಕೃತ್ಯವನ್ನು ಸಮಾಜದ ಯಾವುದೇ ವರ್ಗವು ಕ್ಷಮಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ.
ವಾಸ್ತವವಾಗಿ, ಅವರ ಕೃತ್ಯ ಶಿಕ್ಷಾರ್ಹ... ಇದು ಗಂಭೀರ ಘಟನೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಯನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು" ಎಂದು ವಕೀಲರ ಸಂಘ ವಿಧಾನಸೌಧ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದೆ.
ಸೋಮವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ್ ಕಿಶೋರ್(71) ಶೂ ಎಸೆಯಲು ಯತ್ನಿಸಿದರು. ಆದರೆ ಭದ್ರತಾ ಸಿಬ್ಬಂದಿ ಅದನ್ನು ತಡೆದರು.
Advertisement