
ಪಾಟ್ನಾ: ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿರುವ ಹಿಮಾಲಯ ಪರ್ವತಶ್ರೇಣಿಗಳನ್ನು ನೋಡುವುದು ಹಲವರ ಜೀವಮಾನ ಕನಸು.. ಅಂತಹುದರಲ್ಲಿ ಕುಳಿತಿದ್ದ ಸ್ಥಳದಿಂದಲೇ ಹಿಮಾಲಯ ಪರ್ವತ ಶ್ರೇಣಿಗಳ ದರ್ಶನವಾದರೆ....
ಅಚ್ಚರಿಯಾದರೂ ನಿಜ.. ಬಿಹಾರದ ಗ್ರಾಮವೊಂದರಲ್ಲಿ ಆಗಸದಲ್ಲಿ ಹಿಮಾಲಯದ ಪರ್ವತಶ್ರೇಣಿಗಳು ಗೋಚರವಾಗುತ್ತಿವೆ. ಪ್ರಮುಖವಾಗಿ ಜಗತ್ತಿನ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಕೂಡ ಬರಿಗಣ್ಣಿಗೆ ಕಾಣುತ್ತಿದೆ.
ಬಿಹಾರದ ಮಧುಬನಿ ಜಿಲ್ಲೆಯ ಸಣ್ಣ ಗಡಿ ಪಟ್ಟಣವಾದ ಜೈನಗರದಿಂದ ಕಂಡುಬರುತ್ತಿರವ, ಮೌಂಟ್ ಎವರೆಸ್ಟ್ ಶಿಖರದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಿಡಿಯೋದಲ್ಲಿರುವಂತೆ ಬಿಹಾರದ ಮಧುಬನಿ ಜಿಲ್ಲೆಯ ಸಣ್ಣ ಗಡಿ ಪಟ್ಟಣವಾದ ಜೈನಗರದಲ್ಲಿ ಹಿಮಾಲಯ ಪರ್ವತಗಳು ಕಾಣಿಸುತ್ತಿದ್ದು, ಹಿಮಾಲಯದ ಥಮಸೇಕು, ಎವರೆಸ್ಟ್, ಲ್ಹೋಟ್ಸೆ, ಶಾರ್ಟ್ಸೆ, ಮೆರಾ ಪೀಕ್, ಚಮ್ಲಾಂಗ್ ಮತ್ತು ಮಕಲು ಪರ್ವತಗಳು ಕಾಣಿಸುತ್ತಿವೆ.
ಮಳೆ ಕಾರಣ
ಕಳೆದ ಕೆಲವು ದಿನಗಳಿಂದ ಭಾರೀ ಮಳೆಯನ್ನು ಕಂಡಿದ್ದ ಜೈನಗರದಲ್ಲಿ ಈಗ ಆಕಾಶ ಶುಭ್ರವಾಗಿದೆ. ಅಲ್ಲದೇ ಕಲುಷಿತ ಗಾಳಿಯೂ ದೂರವಾಗಿದ್ದರಿಂದ ಶುದ್ಧ ಪರಿಸರದಲ್ಲಿ ಹಿಮದಿಂದ ಆವೃತವಾದ ಪರ್ವತ ಶ್ರೇಣಿಗಳು ಬರಿಗಣ್ಣಿಗೆ ಗೋಚರವಾಗುತ್ತಿವೆ. ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನ ಭವ್ಯವಾದ ನೋಟವನ್ನು, ಬಿಹಾರದ ಜೈನಗರದ ನಿವಾಸಿಗಳು ತಮ್ಮ ಮನೆಗಳ ಮಹಡಿಯಿಂದಲೇ ನೋಡಿ ಪುಳಕಿತರಾಗುತ್ತಿದ್ದಾರೆ.
ಜೈನಗರದ ಕುರಿತು
ಜೈನಗರವು ಕಮಲಾ ನದಿಯ ದಡದಲ್ಲಿದೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬದಲಾಗುತ್ತಿರುವ ಹಿಮಾಲಯದ ವರ್ಣಗಳ ಸುಂದರ ನೋಟವನ್ನು ಈ ನಗರದಿಂದ ನೋಡಬಹುದಾಗಿದೆ. ವಸಂತ ಪಂಚಮಿಯಿಂದ ಹೋಳಿಯವರೆಗೆ ಮತ್ತು ದುರ್ಗಾ ಪೂಜೆಯಿಂದ ಕಾರ್ತಿಕ ಪೂರ್ಣಿಮೆಯವರೆಗೆ, ಹಿಮಾಲಯದ ಪರ್ವತ ಶ್ರೇಣಿಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಏಕೆಂದರೆ ಈ ಅವಧಿಯಲ್ಲಿ ಈ ಭಾಗದ ಗಾಳಿ ಶುದ್ಧವಾಗಿರುತ್ತದೆ.
ವಿಡಿಯೋ ವೈರಲ್
ಜೈನಗರದದಿಂದ ಮೌಂಟ್ ಎವರೆಸ್ಟ್ ಕಾಣುತ್ತಿರುವ ವಿಡಿಯೋವೊಂದನ್ನು, ಸತ್ಯಂ ರಾಜ್ ಎಂಬ ಸ್ಥಳೀಯರು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. "ಬಿಹಾರದ ಮಧುಬನಿ ಜಿಲ್ಲೆಯ ಜೈನಗರದಿಂದ ಕಾಣುವ ಭವ್ಯ ಹಿಮಾಲಯದ ನೋಟ" ಎಂದು ಸತ್ಯಂ ರಾಜ್ ಅವರು ತಮ್ಮ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
Advertisement