
ನವದೆಹಲಿ: 1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಉಗ್ರರನ್ನು ಹೊರದಬ್ಬಲು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸೂಚನೆಯ ಮೇರೆಗೆ ನಡೆಸಲಾದ 'ಆಪರೇಷನ್ ಬ್ಲೂ ಸ್ಟಾರ್' ತಪ್ಪು ಮಾರ್ಗವಾಗಿತ್ತು ಮತ್ತು ಕಾಂಗ್ರೆಸ್ ನಾಯಕಿ 'ಆ ತಪ್ಪಿಗೆ ತಮ್ಮ ಜೀವವನ್ನೇ ತೆತ್ತರು' ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಆದಾಗ್ಯೂ, ಈ ಕಾರ್ಯಾಚರಣೆಯು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಾಗಿರಲಿಲ್ಲ. ಆದರೆ ಸೇನೆ, ಪೊಲೀಸ್, ಗುಪ್ತಚರ ಸಂಸ್ಥೆಗಳು ಮತ್ತು ನಾಗರಿಕ ಆಡಳಿತವು ಒಟ್ಟಾಗಿ ತೆಗೆದುಕೊಂಡ 'ಜಂಟಿ ನಿರ್ಧಾರ'ವಾಗಿತ್ತು. ಹೀಗಾಗಿ ಇಂದಿರಾ ಗಾಂಧಿಯವರನ್ನೇ ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡಬಾರದು'
ಶನಿವಾರ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್ ಬವೇಜಾ ಅವರ 'ದೇ ವಿಲ್ ಶೂಟ್ ಯು, ಮೇಡಂ' ಪುಸ್ತಕದ ಕುರಿತು ಚರ್ಚೆಯನ್ನು ನಡೆಸುತ್ತಿದ್ದಾಗ ಕೇಂದ್ರದ ಮಾಜಿ ಗೃಹ ಮತ್ತು ಹಣಕಾಸು ಸಚಿವರು ಈ ಹೇಳಿಕೆ ನೀಡಿದ್ದಾರೆ.
'ಇಲ್ಲಿ ಹಾಜರಿರುವ ಯಾವುದೇ ಸೇವಾ ಅಧಿಕಾರಿಗಳಿಗೆ ಅಗೌರವ ತೋರುತ್ತಿಲ್ಲ. ಆದರೆ, ಅದು ಸ್ವರ್ಣ ಮಂದಿರವನ್ನು ಹಿಂಪಡೆಯಲು ಆರಿಸಿದ ತಪ್ಪು ಮಾರ್ಗವಾಗಿತ್ತು. ಅದಾದ ಮೂರ್ನಾಲ್ಕು ವರ್ಷಗಳ ನಂತರ, ಸೇನೆಯನ್ನು ಹೊರಗಿಡುವ ಮೂಲಕ ಸ್ವರ್ಣ ಮಂದಿರವನ್ನು ಹಿಂಪಡೆಯಲು ನಾವು ಸರಿಯಾದ ಮಾರ್ಗವನ್ನು ಆರಿಸಿಕೊಂಡೆವು' ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.
'ಎಲ್ಲ ಉಗ್ರರನ್ನು ಹೊರಹಾಕಲು ಮತ್ತು ಸೆರೆಹಿಡಿಯಲು ಒಂದು ಮಾರ್ಗವಿತ್ತು. ಆದರೆ, ಬ್ಲೂ ಸ್ಟಾರ್ ಆಪರೇಷನ್ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು ಎಂದು ನಾನು ಒಪ್ಪಿಕೊಂಡೆ. ಆದರೆ, ಆ ತಪ್ಪು ನಿರ್ಧಾರವು ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಯ ಜಂಠಿ ನಿರ್ಧಾರವಾಗಿತ್ತು. ನಾವು ಇಂದಿರಾ ಗಾಂಧಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.
1984ರ ಜೂನ್ 1 ರಿಂದ ಜೂನ್ 8 ರವರೆಗೆ, ಇಂದಿರಾ ಗಾಂಧಿ ಸರ್ಕಾರವು ಪಂಜಾಬ್‌ನಲ್ಲಿ ಮೂಲಭೂತವಾದಿ ಪ್ರಚಾರಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಪ್ರತ್ಯೇಕತಾವಾದಿ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ, ಆಪರೇಷನ್ ಬ್ಲೂ ಸ್ಟಾರ್ ಅನ್ನು ನಡೆಸಲಾಯಿತು.
ಸಿಖ್ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಆವರಣಕ್ಕೆ ಭಾರತೀಯ ಸೇನೆ ನುಗ್ಗಿದ ನಂತರ ಸ್ವರ್ಣ ಮಂದಿರದೊಳಗೆ ಅಡಗಿಕೊಂಡಿದ್ದ ಭಿಂದ್ರನ್‌ವಾಲೆ ಅವರನ್ನು ಹತ್ಯೆ ಮಾಡಲಾಯಿತು. ಅಕಾಲ್ ತಖ್ತ್ ಅನ್ನು ನಾಶಮಾಡಲು ಕಾರಣವಾದ ಸೇನಾ ಕಾರ್ಯಾಚರಣೆಯು ಸಿಖ್ ಸಮುದಾಯದೊಳಗೆ ಭಾರಿ ಅಸಮಾಧಾನವನ್ನು ಹುಟ್ಟುಹಾಕಿತು.
ತಿಂಗಳುಗಳ ನಂತರ, ಇಂದಿರಾ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರು ಗುಂಡಿಕ್ಕಿ ಕೊಂದರು. ಅವರ ಹತ್ಯೆಯ ನಂತರ ಸಮುದಾಯದ ವಿರುದ್ಧ ವ್ಯಾಪಕ ಹಿಂಸಾಚಾರ ನಡೆಯಿತು. ಈ ಹಿಂಸಾಚಾರಕ್ಕೆ ಹಲವಾರು ಕಾಂಗ್ರೆಸ್ ನಾಯಕರು ಕಾರಣರೆಂದು ಶಂಕಿಸಲಾಗಿತ್ತು.
ಸರ್ಕಾರದ ಅಂದಾಜಿನ ಪ್ರಕಾರ, ದೆಹಲಿ ಮತ್ತು ಇತರೆಡೆಗಳಲ್ಲಿ 3,000ಕ್ಕೂ ಹೆಚ್ಚು ಸಿಖ್ಖರು ಕೊಲ್ಲಲ್ಪಟ್ಟರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 'ದೊಡ್ಡ ಮರ ಬಿದ್ದಾಗ ನೆಲ ಅಲುಗಾಡುತ್ತದೆ' ಎಂಬ ಹೇಳಿಕೆ ಸೇರಿದಂತೆ ಕಾಂಗ್ರೆಸ್ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಪಕ್ಷವನ್ನು ಪದೇ ಪದೆ ಕಾಡುತ್ತಿದೆ.
Advertisement