
ತಿರುಪತಿ: ಆಂಧ್ರ ಪ್ರದೇಶದ ಪ್ರವಾಸಿಗರ ಆಕರ್ಷಣೀಯ ಸ್ಥಳಗಳಲ್ಲಿ ಒಂದಾದ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ 19 ವರ್ಷದ ಬಿಳಿ ಹುಲಿಯೊಂದು ಭಾನುವಾರ ಸಾವನ್ನಪ್ಪಿದೆ.
'ಸಮೀರ್' ಎಂದು ಕರೆಯಲಾಗುತ್ತಿದ್ದ ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 2011 ರಲ್ಲಿ ಈ ಹುಲಿಗೆ ಐದು ವರ್ಷ ಆಗಿದ್ದಾಗ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಿಂದ ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು.
ಸುಮಾರು 19 ವರ್ಷದ ಹಿರಿಯ ಬಿಳಿ ಹುಲಿ ಸಮೀರ್ ಸಾವನ್ನಪ್ಪಿರುವ ಕುರಿತು ಮೃಗಾಲಯದ ಆಡಳಿತ ಮಂಡಳಿ ತೀವ್ರ ವಿಷಾದ ವ್ಯಕ್ತಪಡಿಸಿದೆ. ವಯಸ್ಸಿಗೆ ಸಂಬಂಧಿಸಿದ ತೊಂದರೆಗಳಿಗಾಗಿ ಸಮೀರ್ ತೀವ್ರ ನಿಗಾದಲ್ಲಿತ್ತು. ಕಳೆದ ಮೂರು ತಿಂಗಳಿನಿಂದ ಅದರ ಆರೋಗ್ಯ ಕ್ಷೀಣಿಸಿತು. ಇದು ಸಂಪೂರ್ಣ ನಿತ್ರಾಣಕ್ಕೆ ಕಾರಣವಾಯಿತು ಎಂದು ಮೃಗಾಲಯದ ಮೇಲ್ವಿಚಾರಕ ಸೆಲ್ವಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೃಗಾಲಯದ ಪಶುವೈದ್ಯಕೀಯ ಮತ್ತು ಪಶುಪಾಲನಾ ಸಿಬ್ಬಂದಿಯಿಂದ ದೈನಂದಿನ ಮೇಲ್ವಿಚಾರಣೆ ಮತ್ತು ಕಾಳಜಿಯ ಹೊರತಾಗಿಯೂ, ಸಮೀರ್ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂದು ಬೆಳಿಗ್ಗೆ ಮೃತಪಟ್ಟಿದೆ.
ತಿರುಪತಿಯ ಎಸ್‌ವಿ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ತಜ್ಞ ರೋಗಶಾಸ್ತ್ರಜ್ಞರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯೇ ಸಾವಿಗೆ ಕಾರಣ ಎಂಬುದು ದೃಢಪಟ್ಟಿದೆ ಎಂದು ಕ್ಯುರೇಟರ್ ಹೇಳಿದರು.
Advertisement