'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್‌ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಆಪರೇಷನ್ ಸಿಂದೂರ ಕುರಿತು ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿರುವ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಣೆ ಮಾಡಿದರು.
PM Narendra Modi Celebrates Diwali With Navy
ಐಎನ್ಎಸ್ ವಿಕ್ರಾಂತ್ ನಲ್ಲಿ ಪ್ರಧಾನಿ ಮೋದಿ
Updated on

ನವದೆಹಲಿ: ಭಾರತೀಯ ಸೇನೆಯ ಮೂರು ಸೇನಾಪಡೆಗಳ ಅಸಾಧಾರಣ ಸಮನ್ವಯದಿಂದಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿರುವ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಣೆ ಮಾಡಿದರು. ಈ ವೇಳೆ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ನಮ್ಮ ಸರ್ಕಾರವು ಭಾರತವನ್ನು ಜಗತ್ತಿನ ಅತಿದೊಡ್ಡ ಆಯುಧ ರಫ್ತು ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. 2014 ರಿಂದ 40ಕ್ಕೂ ಅಧಿಕ ಯುದ್ಧ ನೌಕೆ ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ' ಎಂದು ಹೇಳಿದರು.

ಪ್ರತಿಯೊಬ್ಬರು ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಬಯಸುತ್ತಾರೆ. ನೀವು ನನ್ನ ಕುಟುಂಬವಿದ್ದಂತೆ. ನಿಮ್ಮೊಂದಿಗೆ ಈ ಹಬ್ಬವನ್ನು ಆಚರಿಸುತ್ತಿರುವುದು ಅತೀವ ಸಂತಸ ತಂದಿದೆ. ನಾನು ನಿಮ್ಮೊಂದಿಗೆ ಉತ್ತಮ ಸಮಯವನ್ನು ಕಳೆದಿದ್ದೇನೆ ಎಂದು ಹೇಳಿದರು.

ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್‌ನನ್ನು (ಯುದ್ಧನೌಕೆ) ದೇಶಕ್ಕೆ ಹಸ್ತಾಂತರಿಸುವಾಗ ವಿಕ್ರಾಂತ್ ವಿಶಾಲ, ಅಗಾಧ ಮತ್ತು ಭವ್ಯವಾದದ್ದು ಎಂದು ಹೇಳಿದ್ದೆ. ಇದು ಕೇವಲ ಯುದ್ಧನೌಕೆಯಲ್ಲ 21 ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಸಾಮರ್ಥ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

PM Narendra Modi Celebrates Diwali With Navy
ಧನ್ತೇರಸ್ ಅಂಗವಾಗಿ 60 ಟನ್ ಚಿನ್ನ ಆಭರಣ ಮಾರಾಟ; ದೀಪಾವಳಿ ಮುಕ್ತಾಯಕ್ಕೂ ಮುನ್ನ ವಹಿವಾಟು 1 ಲಕ್ಷ ಕೋಟಿ ದಾಟುವ ನಿರೀಕ್ಷೆ!

ಪಾಕಿಗಳ ನಿದ್ರೆಗೆಡಿಸಿದ್ದ ಐಎನ್ಎಸ್ ವಿಕ್ರಾಂತ್

ಇದೇ ವೇಳೆ ಭಾರತದ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, 'ಇಂದು, ಒಂದು ಕಡೆ, ನನಗೆ ಅನಂತ ದಿಗಂತಗಳು ಮತ್ತು ಅನಂತ ಆಕಾಶವಿದೆ, ಮತ್ತು ಇನ್ನೊಂದು ಕಡೆ ಅನಂತ ಶಕ್ತಿಗಳನ್ನು ಸಾಕಾರಗೊಳಿಸುವ ಈ ದೈತ್ಯ ಐಎನ್‌ಎಸ್ ವಿಕ್ರಾಂತ್ ನನ್ನಲ್ಲಿದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ಧೈರ್ಯಶಾಲಿ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತಿದೆ. ಇಂದು ಅದ್ಭುತ ದಿನ. ಈ ದೃಶ್ಯ ಸ್ಮರಣೀಯವಾಗಿದೆ. ಇಂದು, ಒಂದು ಕಡೆ, ನನ್ನ ಬಳಿ ಸಾಗರವಿದೆ, ಮತ್ತು ಮತ್ತೊಂದೆಡೆ, ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಬಲ ನನ್ನಲ್ಲಿದೆ ಎಂದರು.

'ಕೆಲವೇ ತಿಂಗಳುಗಳ ಹಿಂದೆ, ವಿಕ್ರಾಂತ್ ಪಾಕಿಸ್ತಾನವನ್ನು ನಿದ್ದೆಗೆಡಿಸುವಂತೆ ಮಾಡಿತು ಎಂದು ನಾವು ನೋಡಿದ್ದೇವೆ. ನೌಕಾಪಡೆಯು ಹುಟ್ಟುಹಾಕಿದ "ಭಯ", ವಾಯುಪಡೆಯು ಪ್ರದರ್ಶಿಸಿದ "ಅಸಾಧಾರಣ ಕೌಶಲ್ಯ" ಮತ್ತು ಸೇನೆಯ "ಶೌರ್ಯ", ಜೊತೆಗೆ ಮೂರೂ ಸೇವೆಗಳ ನಡುವಿನ "ಅಸಾಧಾರಣ ಸಮನ್ವಯ"ವು ಆಪರೇಷನ್ ಸಿಂಧೂರ್ ಸಮಯದಲ್ಲಿ ಕೆಲವೇ ದಿನಗಳಲ್ಲಿ ಪಾಕಿಸ್ತಾನವನ್ನು "ಮಂಡಿಯೂರುವಂತೆ ಮಾಡಿತು". ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಆದರೆ "21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬ್ರಹ್ಮೋಸ್, ಆಕಾಶ್‌ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ

ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಮತ್ತು ಆಕಾಶ್‌ನಂತಹ ಕ್ಷಿಪಣಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ ಎಂದ ಪ್ರಧಾನಿ ಮೋದಿ, 'ಪ್ರಪಂಚದಾದ್ಯಂತ ಹಲವಾರು ದೇಶಗಳು ಈಗ ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ಹೊಂದಿವೆ' ಎಂದರು.

ನಾನು ಮಿಲಿಟರಿ ಉಪಕರಣಗಳ ಗಮನಿಸುತ್ತಿದ್ದೆ. ಈ ದೊಡ್ಡ ಹಡಗುಗಳು, ಗಾಳಿಗಿಂತ ವೇಗವಾಗಿ ಚಲಿಸುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ, ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾನ್ನಾಗಿಸಿರುವುದು ಯೋಧರ ಧೈರ್ಯ ಎಂದಿದ್ದಾರೆ.

"ಜನರು ತಮ್ಮ ಕುಟುಂಬಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಇಷ್ಟಪಡುತ್ತಾರೆ. ನನಗೂ ಹಾಗೆಯೇ, ಅದಕ್ಕಾಗಿಯೇ ನಾನು ಪ್ರತಿ ವರ್ಷ ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿರಿಸುವ ನಮ್ಮ ಸೈನ್ಯ ಮತ್ತು ಭದ್ರತಾ ಸಿಬ್ಬಂದಿಯನ್ನು ಭೇಟಿಯಾಗುತ್ತೇನೆ. ಐಎನ್‌ಎಸ್ ವಿಕ್ರಾಂತ್ ಅನ್ನು ಫ್ಲ್ಯಾಗ್‌ಶಿಪ್‌ನೊಂದಿಗೆ ಭಾರತೀಯ ನೌಕಾ ಹಡಗುಗಳಲ್ಲಿ ಗೋವಾ ಮತ್ತು ಕಾರವಾರದ ಪಶ್ಚಿಮ ಸಮುದ್ರತೀರದಲ್ಲಿ ನಮ್ಮ ಧೈರ್ಯಶಾಲಿ ನೌಕಾ ಸಿಬ್ಬಂದಿಗಳಲ್ಲಿ ಒಬ್ಬರಾಗಲು ಸಂತೋಷವಾಗಿದೆ" ಎಂದು ಅವರು ಹೇಳಿದರು.

ಶೀಘ್ರ ನಕ್ಸಲ್ ವಾದ ನಿರ್ನಾಮ

ಇದೇ ವೇಳೆ, ನಕ್ಸಲ್ ಸಮಸ್ಯೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, 'ಸೇನಾಪಡೆಯ ಶೌರ್ಯ ಮತ್ತು ಸಹಕಾರದಿಂದ ದೇಶದಲ್ಲಿ ನಕ್ಸಲರನ್ನು ನಿರ್ನಾಮ ಮಾಡಲು ಸಾಧ್ಯವಾಗಿದೆ. ಅವರಿಂದ ಮರಳಿ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಾಗಿದೆ. ದೇಶದಲ್ಲಿ ನಕ್ಸಲರ ವಿರುದ್ಧ ಶೇ 90ರಷ್ಟು ಯಶಸ್ಸು ಸಾಧಿಸಲಾಗಿದೆ. ನಕ್ಸಲರ ಹಿಂಸಾಚಾರವನ್ನು ಸಂಪೂರ್ಣ ಕೊನೆಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ದೇಶದಲ್ಲಿ 125 ಜಿಲ್ಲೆಗಳನ್ನು ನಕ್ಸಲ್‌ ಪೀಡಿತ ಜಿಲ್ಲೆಗಳು ಎಂದು ಘೋಷಿಸಲಾಗಿತ್ತು. ಇದೀಗ ಕೇವಲ 11 ಜಿಲ್ಲೆಗಳು ಮಾತ್ರ ಆ ಹಣೆಪಟ್ಟಿಯನ್ನು ಹೊತ್ತುಕೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com