
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿರೋಧ ಪಕ್ಷಗಳ ಇಂಡಿಯಾ ಬಣ ಗುರುವಾರ ಘೋಷಿಸಿದೆ.
ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದರು. ಈ ನಿರ್ಧಾರವನ್ನು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿದ್ದಾರೆ ಎಂದು ಪ್ರತಿಪಾದಿಸಿದರು.
ಇಂಡಿಯಾ ಬಣವು ಬಿಹಾರದಲ್ಲಿ ಸರ್ಕಾರ ರಚಿಸಿದರೆ, ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗುತ್ತಾರೆ ಮತ್ತು ಅದೇ ಹುದ್ದೆಯನ್ನು ಹಿಂದುಳಿದ ವರ್ಗಗಳ ಮತ್ತೊಬ್ಬ ನಾಯಕ ಅಲಂಕರಿಸುತ್ತಾರೆ ಎಂದು ಗೆಹ್ಲೋಟ್ ಹೇಳಿದರು.
ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು, ಮೈತ್ರಿಕೂಟದ ಪಾಲುದಾರರಿಗೆ ಧನ್ಯವಾದ ಅರ್ಪಿಸಿದರು ಮತ್ತು ಮಹಾಘಟಬಂಧನ್ ಎನ್‌ಡಿಎಯನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'ನಾವು, ಮಹಾಘಟಬಂಧನದ ಜನರು, ಕೇವಲ ಸರ್ಕಾರ ರಚಿಸಲು ಅಥವಾ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ. ಆದರೆ, ನಾವು ಬಿಹಾರವನ್ನು ಅಭಿವೃದ್ಧಿ ಮಾಡಲು ಬಯಸುತ್ತೇವೆ. ಅದಕ್ಕಾಗಿಯೇ ನಾವು ಒಟ್ಟಿಗೆ ಇದ್ದೇವೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮಹಾಘಟಬಂಧನದ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ. ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ ಮತ್ತು ಒಟ್ಟಾಗಿ ಅಧಿಕಾರದಲ್ಲಿರುವ 20 ವರ್ಷಗಳ ಸರ್ಕಾರವನ್ನು ಉರುಳಿಸುತ್ತೇವೆ ಎಂದು ನಾನು ಅವರೆಲ್ಲರಿಗೂ ಹೇಳಲು ಬಯಸುತ್ತೇನೆ' ಎಂದು ಅವರು ಹೇಳಿದರು.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಬಿಜೆಪಿ ಬೆಂಬಲ ನೀಡುವುದಿಲ್ಲ ಎಂದು ತೇಜಸ್ವಿ ಹೇಳಿಕೊಂಡಿದ್ದು, ಎನ್‌ಡಿಎ ಒಳಗೆ ಅವರಿಗೆ 'ಅನ್ಯಾಯ' ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
'ನಾವು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಎನ್‌ಡಿಎಯಲ್ಲಿ ನಿತೀಶ್ ಕುಮಾರ್‌ಗೆ ಅನ್ಯಾಯವಾಗುತ್ತಿದೆ. ಒಂದೇ ಒಂದು ಜಂಟಿ ಪತ್ರಿಕಾಗೋಷ್ಠಿಯೂ ನಡೆದಿಲ್ಲ. ಅವರ ಸಿಎಂ ಅಭ್ಯರ್ಥಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ' ಎಂದು ಅವರು ಹೇಳಿದರು.
Advertisement