
ನವದೆಹಲಿ: ಅಕ್ಟೋಬರ್ 26 ರಿಂದ 28 ರವರೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಆಗಿ ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.
ಮಲೇಷಿಯಾ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಲೇಷಿಯಾ ಪ್ರಧಾನಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿರುವ ಮೋದಿಯವರು, ಮುಂಬರುವ ಶೃಂಗಸಭೆಗಳ ಯಶಸ್ಸಿಗೆ ಶುಭಾಶಯ ಕೋರಿದ್ದಾರೆ.
ನನ್ನ ಆತ್ಮೀಯ ಗೆಳೆಯ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಆತ್ಮೀಯ ಸಂಭಾಷಣೆ ನಡೆಸಿದೆ. ಆಸಿಯಾನ್-ಭಾರತ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಲು ಮತ್ತು ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.
ಶೃಂಗಸಭೆಗೆ ಮಲೇಷಿಯಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆಸಿಯಾನ್‌ನ ಪಾಲುದಾರ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದು, ಆಹ್ವಾನ ಹಿನ್ನೆಲೆ ಟ್ರಂಪ್ ಅವರು, ಅಕ್ಟೋಬರ್ 26 ರಂದು ಎರಡು ದಿನಗಳ ಪ್ರವಾಸಕ್ಕಾಗಿ ಕೌಲಾಲಂಪುರಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ತಪ್ಪಿಸಲು ಮೋದಿಯವರು ಶೃಂಗಸಭೆಗೆ ಗೈರು ಹಾಜರಾಗುತ್ತಿದ್ದಾರೆಂದು ಕಾಂಗ್ರೆಸ್ ಟೀಕಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಹೊಗಳಿ ಪೋಸ್ಟ್ ಮಾಡಿರುವುದು ಒಂದೆಡೆಯಾದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಈಗಾಗಲೇ 53 ಸಲ ಟ್ರಂಪ್ ಪುನರುಚ್ಚರಿಸಿದ್ದಾರೆ. ಅಷ್ಟು ಸಾಲದು ಎಂಬಂತೆ ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸಲಿದೆ ಎಂದು ಈಗಾಗಲೇ ಐದು ಬಾರಿ ಹೇಳಿದ್ದಾರೆ. ಇಂತಹ ವ್ಯಕ್ತಿಯನ್ನು ನೇರವಾಗಿ ವೈಯಕ್ತಿಕವಾಗಿ ಭೇಟಿ ಆಗುವುದು ಮೋದಿ ಅವರಿಗೆ ತೀರಾ ಅಪಾಯಕಾರಿ ಎಂದು ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಆಸಿಯಾನ್ ಸಭೆಯಲ್ಲಿ ಭಾಗಿಯಾಗಲು ಕೌಲಾಲಂಪುರಕ್ಕೆ ಪ್ರಧಾನಿ ಮೋದಿ ಹೋಗುವರೇ ಅಥವಾ ಹೋಗುವುದಿಲ್ಲವೇ ಎಂಬ ಚರ್ಚೆಗಳು ನಡೆಯುತ್ತಲೇ ಇದ್ದವು. ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಈಗ ಖಚಿತವಾಗಿದೆ. ಇದರಿಂದ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ತಬ್ಬಿಕೊಂಡು, ಅವರೊಂದಿಗೆ ಚಿತ್ರ ತೆಗೆಸಿಕೊಳ್ಳುವುದರಿಂದ ಮೋದಿ ಅವರು ವಂಚಿತರಾಗಿದ್ದಾರೆ. ಜೊತೆಗೆ ವಿಶ್ವ ವೇದಿಕೆಯಲ್ಲಿ ‘ತಾನೊಬ್ಬ ವಿಶ್ವಗುರು’ ಎಂದು ಹೇಳಿಕೊಳ್ಳುವ ಅವಕಾಶವನ್ನೂ ಕೈಚೆಲ್ಲಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬುದು ನಗ್ನ ಸತ್ಯ. ಕೆಲ ದಿನಗಳ ಹಿಂದೆ ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಸಭೆಯಲ್ಲಿ ಭಾಗವಹಿಸುವ ಆಹ್ವಾನವನ್ನೂ ಮೋದಿ ತಿರಸ್ಕರಿಸಿದ್ದೂ ಇದೇ ಕಾರಣಕ್ಕಾಗಿ. ಈಗಲೂ ಟ್ರಂಪ್ ಅವರಿಂದ ತಪ್ಪಿಸಿಕೊಳ್ಳಲು ಗೈರಾಗುವ ತಂತ್ರವನ್ನು ಅಳವಡಿಸಿಕೊಂಡಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಜೊತೆಗೆ ಬಾಲಿವುಡ್‌ನ ಜನಪ್ರಿಯ ಗೀತೆ ‘ಬಚ್ ಕೆ ರೆಹನಾ ರೆ ಬಾಬಾ, ಬಚ್‌ಕೆ ರೆಹನಾ ಹೆ’ ಗೀತೆಯ ಸಾಲನ್ನು ತಮ್ಮ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.
ಮಲೇಷ್ಯಾದಲ್ಲಿ ಅ. 26ರಿಂದ 28ರವರೆಗೆ ಆಯೋಜನೆಗೊಂಡಿರುವ ಆಸಿಯಾನ್ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಬದಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಲ್ಗೊಳ್ಳುತ್ತಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿ ಅವರು ವರ್ಚುವಲ್ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
1992ರಲ್ಲಿ ಪ್ರಾದೇಶಿಕ ಪಾಲುದಾರಿಕೆ ಮೂಲಕ ಆಸೀನ್ ಮತ್ತು ಭಾರತದ ಸಂಬಂಧ ಆರಂಭವಾಯಿತು. 1995ರಲ್ಲಿ ಇದು ಪೂರ್ಣ ಪ್ರಮಾಣಕ್ಕೆ ಬೆಳೆಯಿತು. 2022ರಲ್ಲಿ ಇದು ಶೃಂಗ ಸಭೆಯ ಮಟ್ಟಕ್ಕೆ ವೃದ್ಧಿಸಿತು. 2012ರಲ್ಲಿ ಕಾರ್ಯತಂತ್ರದ ಪಾಲುದಾರಿಕೆಯಾಗಿ ಈ ಸಂಬಂಧ ಇನ್ನಷ್ಟು ವಿಸ್ತರಿಸಿಕೊಂಡಿತು.
ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪಿನ್ಸ್, ಸಿಂಗಪೂರ, ಥಾಯ್ಲೆಂಡ್, ಬ್ರುನೈ, ವಿಯಟ್ನಾಂ, ಲಾವೋಸ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾ ಸೇರಿದಂತೆ ಹತ್ತು ರಾಷ್ಟ್ರಗಳು ಆಸಿಯಾನ್ ಒಕ್ಕೂಟದಲ್ಲಿವೆ.
Advertisement