
ದಕ್ಷಿಣ ಏಷ್ಯಾದಾದ್ಯಂತ, ಯುವ ಜನಾಂಗ ನಿರ್ದೇಶಿತ ಪ್ರತಿಭಟನೆಗಳು, ಹೋರಾಟಗಳು ರಾಜಕೀಯವನ್ನು ಬದಲಾಯಿಸುತ್ತಿವೆ. ಆದರೆ, ಭಾರತ ಇದರತ್ತ ಗಮನ ಹರಿಸುತ್ತಿಲ್ಲ. ಕಳೆದ ಕೆಲ ವರ್ಷಗಳಲ್ಲಿ, ಸಾರ್ವಜನಿಕರ ಆಕ್ರೋಶಕ್ಕೆ ಬಾಂಗ್ಲಾದೇಶ, ನೇಪಾಳ, ಮತ್ತು ಶ್ರೀಲಂಕಾಗಳ ಸರ್ಕಾರಗಳು ಪತನಗೊಂಡಿವೆ. ಇವುಗಳನ್ನು ಎಲ್ಲೋ ನಡೆದ ಒಂದೊಂದು ಪ್ರತಿಭಟನೆಗಳು ಎಂದು ಕಡೆಗಣಿಸಲು ಸಾಧ್ಯವಿಲ್ಲ. ಯಾಕೆಂದರೆ, ಈ ಪ್ರತಿಭಟನೆಗಳು ನಿರುದ್ಯೋಗ, ಭ್ರಷ್ಟಾಚಾರ, ಮತ್ತು ಅಸಮಾನತೆಗಳಂತಹ ಸಮಸ್ಯೆಗಳಿಂದ ಬಳಲಿರುವ ಯುವಜನರ ಗಂಭೀರವಾದ ಹತಾಶೆಗಳನ್ನು ತೋರಿಸುತ್ತಿವೆ.
ನೇಪಾಳದಲ್ಲಿ ಐವರಲ್ಲಿ ಒಬ್ಬ ಯುವಕರು ನಿರುದ್ಯೋಗಿಗಳಾಗಿದ್ದರೆ, ನೇಪಾಳದ ಸರಾಸರಿ ವಯಸ್ಸು ಕೇವಲ 25 ಆಗಿದೆ. ಪುನರಾವರ್ತನೆಗೊಂಡ ರಾಜಕೀಯ ವೈಫಲ್ಯಗಳು, ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ, ಮತ್ತು ವ್ಯಾಪಕ ಭ್ರಷ್ಟಾಚಾರದ ಆರೋಪಗಳು ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡುವಂತೆ ಮಾಡಿದವು. ಬಾಂಗ್ಲಾದೇಶದ 'ಮಾನ್ಸೂನ್ ಕ್ರಾಂತಿ' ಶೇಖ್ ಹಸೀನಾರ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿ, ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಹಾದಿ ಮಾಡಿಕೊಟ್ಟಿತು. ಶ್ರೀಲಂಕಾದಲ್ಲಿ 2024ರ ಚುನಾವಣೆ ಅನೂರ ಕುಮಾರ ದಿಸ್ಸನಾಯಕೆಗೆ ಅನಿರೀಕ್ಷಿತ ಗೆಲುವು ನೀಡಿ, ದಶಕಗಳ ಕಾಲ ಜಾರಿಯಲ್ಲಿದ್ದ ಕೌಟುಂಬಿಕ ಆಡಳಿತವನ್ನು ಕೊನೆಗೊಳಿಸಿತು.
ಇಂತಹ ಐತಿಹಾಸಿಕ ಬದಲಾವಣೆಗಳು ಜರುಗುತ್ತಿದ್ದಾಗ, ಭಾರತ ತನ್ನ ಜಾಗತಿಕ ಮಹತ್ವಾಕಾಂಕ್ಷೆಯತ್ತ ಗಮನ ಹರಿಸಿತ್ತು. ಭಾರತ ಜಿ20 ಶೃಂಗಸಭೆಯ ಆತಿಥ್ಯ ವಹಿಸಿತ್ತು, ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿತ್ತು, ಮತ್ತು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಸಿದ್ಧತೆ ನಡೆಸುತ್ತಿತ್ತು. ಇಷ್ಟೆಲ್ಲ ಸಾಧನೆಗಳ ನಡುವೆ, ಭಾರತ ತನ್ನ ಜಾಗತಿಕ ಶಕ್ತಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಪ್ರಾದೇಶಿಕ ವಿಚಾರಗಳನ್ನು ನಿರ್ಲಕ್ಷಿಸಿತ್ತು.
ಭಾರತದ ಅತ್ಯುನ್ನತ ವಿದೇಶಾಂಗ ನೀತಿಯ ವೇದಿಕೆಯಾದ, ರೈಸಿನಾ ಸಂವಾದದಲ್ಲಿ, ನಾಯಕರು ಉಕ್ರೇನ್, ಗಾಜಾ಼, ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಸಮಾಲೋಚನೆ ನಡೆಸಿದರೂ, ದಕ್ಷಿಣ ಏಷ್ಯಾದ ಕುರಿತ ವಿಚಾರಗಳನ್ನು ಕಡೆಗಣಿಸಿದರು. ಬಾಂಗ್ಲಾದೇಶದ ಕ್ರಾಂತಿ ನಡೆದ ಕೆಲ ಸಮಯದಲ್ಲಿ, ಮತ್ತು ಕಳೆದ 20 ವರ್ಷಗಳಲ್ಲೇ ಅತ್ಯಂತ ಘೋರ ಭಯೋತ್ಪಾದನಾ ದಾಳಿಯಾದ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಮುನ್ನ ಈ ಮೌನ ಕಂಡುಬಂದಿತ್ತು. ಅಫ್ಘಾನಿಸ್ತಾನ, ಮಯನ್ಮಾರ್ ಅಥವಾ ಪ್ರಾದೇಶಿಕ ಅಸ್ಥಿರತೆಗಳ ಕುರಿತೂ ಸಹ ಯಾವುದೇ ಚರ್ಚೆ ನಡೆದಿಲ್ಲ.
ಇಂದಿನ ದಕ್ಷಿಣ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿದೆ. ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳ ಆರ್ಥಿಕತೆಗಳು ಕುಸಿದಿದ್ದು, ಅವು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಹಾಯದಿಂದ ಉಳಿದುಕೊಂಡಿವೆ. ಅಫ್ಘಾನಿಸ್ತಾನ ಮತ್ತು ಮಯನ್ಮಾರ್ ಬಹುತೇಕ ಪತನದ ಅಂಚಿನಲ್ಲಿವೆ. ಭಾರತ ಗಡಿ ಉದ್ವಿಗ್ನತೆಗಳನ್ನು ಎದುರಿಸುತ್ತಿದ್ದು, ಚೀನಾ ಮತ್ತು ಪಾಕಿಸ್ತಾನಗಳು ಅಣ್ವಸ್ತ್ರಯುತ ಶತ್ರುಗಳಾಗಿವೆ. ಇಷ್ಟೊಂದು ವಿಶಾಲವಾದ ಭೂ ಪ್ರದೇಶವನ್ನು ಹಂಚಿಕೊಂಡರೂ, ದಕ್ಷಿಣ ಏಷ್ಯಾದ ದೇಶಗಳು ಪರಸ್ಪರರೊಡನೆ ಕೇವಲ 5% ವ್ಯಾಪಾರ ವಹಿವಾಟು ಮಾತ್ರ ನಡೆಸುತ್ತಿವೆ. ಪ್ರಾದೇಶಿಕ ಸಂಘಟನೆಯಾದ ಸಾರ್ಕ್ 2014ರ ನಂತರ ಸಭೆ ಸೇರದಿರುವುದು ಒಗ್ಗಟ್ಟಿನ ಕೊರತೆಯನ್ನು ಸಾರುತ್ತಿದೆ.
ಕೆಲವು ಭಾರತೀಯ ವಿಶ್ಲೇಷಕರು ನವದೆಹಲಿ ಪ್ರಾದೇಶಿಕ ವಿಚಾರಗಳ ಕುರಿತು ಯೋಚಿಸುತ್ತಾ ಕೂರುವ ಬದಲು, 'ಸಮಾನ ಆಸಕ್ತಿಗಳ' ಕುರಿತು ಗಮನ ಹರಿಸಬೇಕು, ಅಂದರೆ ಕ್ವಾಡ್, ಬ್ರಿಕ್ಸ್ ನಂತಹ ಜಾಗತಿಕ ಗುಂಪುಗಳತ್ತ ಸಾಗಬೇಕು ಎಂದು ಅಭಿಪ್ರಾಯಪಡುತ್ತಾರೆ. ಆದರೆ, ನೆರೆಹೊರೆಯನ್ನು ನಿರ್ಲಕ್ಷಿಸುವುದರಿಂದ ಭಾರತದ ಪ್ರಭಾವವೂ ಕುಸಿಯುವ ಸಾಧ್ಯತೆಗಳಿವೆ. ಇನ್ನು ಪಾಕಿಸ್ತಾನವನ್ನು ಹೊರಗಿಟ್ಟಿರುವ ಬಿಮ್‌ಸ್ಟೆಕ್ (BIMSTEC) ಸಹ ಕಳೆದ ಮೂರು ದಶಕಗಳಲ್ಲಿ ಕೇವಲ ಆರು ಬಾರಿ ಮಾತ್ರವೇ ಸಭೆ ಸೇರಿದೆ.
ಇಂತಹ ಕಡೆಗಣನೆ ದೇಶದೊಳಗೂ ಕಂಡುಬಂದಿದೆ. ಲಡಾಖಿನ ಪ್ರತಿಭಟನೆಗಳು ಮಣಿಪುರದ ಹಿಂಸಾಚಾರವನ್ನು ಹೋಲುತ್ತಿದ್ದು, ಇವೆರಡೂ ಗಡಿ ಪ್ರದೇಶಗಳೇ ಆಗಿವೆ. ಮಣಿಪುರದಲ್ಲಿ ಗಲಭೆಗಳು ಆರಂಭಗೊಂಡು ಎರಡು ವರ್ಷಗಳಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡಿರುವುದು ಈ ಸಮಸ್ಯೆಯ ಕುರಿತು ಸರ್ಕಾರಕ್ಕೆ ಯಾವುದೇ ಅವಸರವಿಲ್ಲ ಎಂಬ ಸಂದೇಶ ನೀಡಿದೆ. ಭಾರತದ 'ಆ್ಯಕ್ಟ್ ಈಸ್ಟ್' (ಪೂರ್ವದತ್ತ ಗಮನ) ನೀತಿ ಆಗ್ನೇಯ ಏಷ್ಯಾದ ಸಂಪರ್ಕವನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತಾದರೂ, ಮಯನ್ಮಾರ್‌ನ ಆಂತರಿಕ ಯುದ್ಧ ಮತ್ತು ಬಾಂಗ್ಲಾದೇಶದ ಜೊತೆಗೆ ಹಳಸಿದ ಸಂಬಂಧದ ಪರಿಣಾಮವಾಗಿ ಮೂಲೆಗುಂಪಾಗಿದೆ.
ಆದರೆ ಚೀನಾ ವಿಭಿನ್ನವಾದ ಮಾರ್ಗವನ್ನು ಅನುಸರಿಸಿದೆ. ಜಾಗತಿಕ ನಾಯಕತ್ವ ಪಡೆಯಲು ಪ್ರಯತ್ನ ನಡೆಸುವ ಮುನ್ನ, ಚೀನಾ ಏಷ್ಯಾದಾದ್ಯಂತ ತನ್ನ ವ್ಯಾಪಾರ ಮತ್ತು ಮೂಲಭೂತ ಸೌಕರ್ಯಗಳ ಸಂಬಂಧವನ್ನು ಗಟ್ಟಿಗೊಳಿಸಿತು. ಭಾರತ ಸ್ವತಃ ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆದು, ತನ್ನ ಗಡಿಗಳನ್ನು ಸುರಕ್ಷಿತಗೊಳಿಸಬೇಕಾದರೆ ಮೊದಲು ಭಾರತ ಅಭಿವೃದ್ಧಿ ಮತ್ತು ಸಹಕಾರದ ಮೂಲಕ ನೆರೆ ರಾಷ್ಟ್ರಗಳನ್ನು ಗೆಲ್ಲಬೇಕು.
ಪಾಶ್ಚಾತ್ಯ ಸರ್ಕಾರಗಳು ಸಾಮಾನ್ಯವಾಗಿ ಭಾರತವನ್ನು ದಕ್ಷಿಣ ಏಷ್ಯಾದಿಂದ ಭಿನ್ನವಾಗಿ ಪರಿಗಣಿಸುತ್ತವೆ. ಅಮೆರಿಕ ಮತ್ತು ಯುಕೆ ಭಾರತ ಮತ್ತು ಅಫ್ಘಾನಿಸ್ತಾನ - ಪಾಕಿಸ್ತಾನ ಪ್ರಾಂತ್ಯಕ್ಕಾಗಿ ಪ್ರತ್ಯೇಕ, ವಿಭಿನ್ನ ವಿಭಾಗಗಳನ್ನು ಹೊಂದಿವೆ. ಆದರೆ, ಈ ಪ್ರತ್ಯೇಕತೆಯೂ ಭಾರತದ ಪ್ರಾದೇಶಿಕ ಪಾತ್ರವನ್ನು ಮಿತಿಗೊಳಿಸುತ್ತದೆ. ದ ಫಾರಿನ್ ಪಾಲಿಸಿ ನಿಯತಕಾಲಿಕೆ ದಕ್ಷಿಣ ಏಷ್ಯಾದಲ್ಲಿ ಯಾಕೆ ಒಗ್ಗಟ್ಟಿನ ಕೊರತೆ ಇದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಸಚಿವರು, ಭಾರತದ ಸಹಾಯ, ಮೂಲಭೂತ ಸೌಕರ್ಯಗಳು, ಮತ್ತು ವ್ಯಾಕ್ಸಿನ್ ರಾಜತಾಂತ್ರಿಕತೆಯನ್ನು ವಿವರಿಸಿದ್ದರು. ಆದರೆ, ಇದಾವುದೂ ಅಪನಂಬಿಕೆಯನ್ನು ಕಡಿಮೆಗೊಳಿಸಲು ಯಶಸ್ವಿಯಾಗಿಲ್ಲ.
ದಕ್ಷಿಣ ಏಷ್ಯಾದ ಯುವಜನರ ಚಳುವಳಿಗಳು ಒಂದು ಹೊಸದಾದ ವ್ಯವಸ್ಥೆಗಾಗಿ ಬೇಡಿಕೆ ಇಡುತ್ತಿವೆ. ಬಾಂಗ್ಲಾದೇಶದಲ್ಲಿ ಎರಡು ಪ್ರಮುಖ ಪಕ್ಷಗಳ ನಡುವಿನ 'ಬೇಗಂಗಳ ವೈರತ್ವ' ಕೊನೆಗೂ ಕೊನೆಯಾಗಬಹುದು. ಚೀನಾದ ಹೆಚ್ಚುತ್ತಿರುವ ವ್ಯಾಪಾರ ಮತ್ತು ಪ್ರಭಾವ ಸಣ್ಣ ದೇಶಗಳಿಗೂ ಭಾರತದ ವಿರುದ್ಧ ಧ್ವನಿ ಎತ್ತುವ ಶಕ್ತಿ ನೀಡಬಹುದು. ಅವುಗಳು ಮಾಲ್ಡೀವ್ಸ್‌ನ 'ಇಂಡಿಯಾ ಔಟ್' ಚಳುವಳಿಯ ರೀತಿಯಲ್ಲಿ ಭಾರತ ವಿರೋಧಿ ಮಾತುಗಳನ್ನು ಆಡುವ ಸಾಧ್ಯತೆಗಳಿವೆ.
ಇವೆಲ್ಲದರ ಹೊರತಾಗಿ, ಭಾರತ ಇಂದಿಗೂ ಪ್ರಮುಖ ಸ್ಥಿರತೆ ಕಾಯ್ದುಕೊಳ್ಳುವ ದೇಶವಾಗಿದೆ. ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ಗಳಿಗೆ ಬೇರೆ ಯಾವ ರಾಷ್ಟ್ರವೂ ನೆರವು ನೀಡಲು ಮುಂದಾಗದ ಸಂದರ್ಭದಲ್ಲಿ ಭಾರತ ತುರ್ತು ಸಾಲದ ಸಹಾಯ ನೀಡಿದೆ. ಆದರೆ ಕೇವಲ ಒಳ್ಳೆಯ ಮನಸ್ಸಷ್ಟೇ ಸಾಕಾಗುವುದಿಲ್ಲವಲ್ಲ! ಭಾರತ ಈ ನೆರವಿನ ನಡೆಗಳೊಡನೆ, ಆ ದೇಶಗಳೊಡನೆ ಸಂಬಂಧ, ಸಂಪರ್ಕ ಮತ್ತು ಅವುಗಳ ಸ್ಥಳೀಯ ಆಡಳಿತಕ್ಕೆ ಗೌರವವನ್ನು ಸಾಧಿಸಬೇಕು.
ನಿಜಕ್ಕೂ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯಬೇಕಾದರೆ, ಭಾರತ ಇತರ ದೇಶಗಳೊಡನೆ ಸಹಾನುಭೂತಿ ಮತ್ತು ಸಹಭಾಗಿತ್ವ ಹೊಂದಬೇಕೇ ಹೊರತು ಅವುಗಳ ಮೇಲೆ ಪ್ರಾಬಲ್ಯ ಸಾಧಿಸಲು ಹೋಗಬಾರದು. ಭಾರತ ಪ್ರಾದೇಶಿಕ ಪೂರೈಕೆ ಸರಪಳಿಗಳನ್ನು ನಿರ್ಮಿಸಬೇಕು, ಗಡಿಯಾಚೆಗೂ ಮೂಲಭೂತ ಸೌಕರ್ಯಗಳಿಗೆ ಹೂಡಿಕೆ ಮಾಡಬೇಕು, ಮತ್ತು ಶಿಕ್ಷಣ ಹಾಗೂ ತಂತ್ರಜ್ಞಾನಗಳ ಮೂಲಕ ನೇರವಾಗಿ ಜನರ ನಡುವೆ ಸಂಪರ್ಕ ಏರ್ಪಡಿಸಲು ಪ್ರಯತ್ನಿಸಬೇಕು. ದಕ್ಷಿಣ ಏಷ್ಯಾದ ಪ್ರಗತಿ ಮತ್ತು ಭಾರತದ ಉತ್ಕರ್ಷ ಒಂದಕ್ಕೊಂದು ಆಳವಾದ ಸಂಪರ್ಕ ಹೊಂದಿದ್ದು, ಒಂದನ್ನು ಬಿಟ್ಟು ಇನ್ನೊಂದು ಯಶಸ್ವಿಯಾಗಲು ಸಾಧ್ಯವಿಲ್ಲ.
ಯಾವುದೇ ಪ್ರಮುಖ ದೇಶವೂ ತನ್ನ ಪ್ರಾದೇಶಿಕ ಪರಿಸ್ಥಿತಿ ಸರಿ ಇಲ್ಲದಿರುವಾಗ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ದಕ್ಷಿಣ ಏಷ್ಯಾ ಬಹುತೇಕ ಜಗತ್ತಿನ ಕಾಲು ಭಾಗ ಜನಸಂಖ್ಯೆ ಹೊಂದಿದ್ದು, ಇವರಲ್ಲಿ ಬಹುತೇಕರು ಯುವ ಜನರಾಗಿದ್ದಾರೆ. ಈ ಯುವ ಜನಾಂಗ ಈಗ ಹೆಚ್ಚು ಚಡಪಡಿಕೆ ಹೊಂದಿದ್ದಾರೆ. ಅವರ ಮಹತ್ವಾಕಾಂಕ್ಷೆಗಳು ಭವಿಷ್ಯವನ್ನು ರೂಪಿಸಲಿದ್ದು, ಭಾರತದ ವಿಧಿಯೂ ಅವರೊಡನೆ ಬೆಸೆದುಕೊಂಡಿದೆ.
ಭಾರತ ನಿಜಕ್ಕೂ ಜಾಗತಿಕ ಶಕ್ತಿಯಾಗಬೇಕಾದರೆ, ಭಾರತ ಮೊದಲಿಗೆ ಪ್ರಾದೇಶಿಕ ನಾಯಕತ್ವ ವಹಿಸಿಕೊಂಡು, ತನ್ನ ನೆರೆಹೊರೆ ಚೇತರಿಸಿಕೊಳ್ಳಲು ನೆರವಾಗಬೇಕು. ಜಾಗತಿಕ ಮಹತ್ವಾಕಾಂಕ್ಷೆಗಳು ಮನೆಯಲ್ಲೇ ಆರಂಭಗೊಳ್ಳುತ್ತವೆ. ಭಾರತದ ಮುಂದಿನ ನೆಗೆತ ಕೇವಲ ರಾಕೆಟ್‌ಗಳು ಮತ್ತು ಜಿಡಿಪಿ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ ನಂಬಿಕೆ, ಸ್ಥಿರತೆ ಮತ್ತು ದಕ್ಷಿಣ ಏಷ್ಯಾದಲ್ಲಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮೇಲೂ ಅವಲಂಬಿಸಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement