

ಲಖನೌ: ಮುಸ್ಲಿಂ ಯುವತಿಯರೊಂದಿಗೆ ಓಡಿಹೋಗುವ ಯಾವುದೇ ಹಿಂದೂ ಪುರುಷನಿಗೆ ಉದ್ಯೋಗ ವ್ಯವಸ್ಥೆ ಮಾಡುವುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕರೊಬ್ಬರು, ರಾಜ್ಯದಲ್ಲಿ ಹಿಂದೂಗಳು ಯಾವುದೇ ಭಯವಿಲ್ಲದೆ ಏನು ಬೇಕಾದರೂ ಮಾಡಬಹುದು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಸಿದ್ಧಾರ್ಥನಗರ ಜಿಲ್ಲೆಯ ದುಮಾರಿಯಾಗಂಜ್‌ನ ಬಿಜೆಪಿ ಮಾಜಿ ಶಾಸಕರಾಗಿರುವ ರಾಘವೇಂದ್ರ ಪ್ರತಾಪ್ ಸಿಂಗ್, ಕ್ಷೇತ್ರದ ಧಂಖರ್‌ಪುರ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಇಬ್ಬರು ಹಿಂದೂ ಮಹಿಳೆಯರನ್ನು ಮುಸ್ಲಿಂ ಪುರುಷರೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ, ಮತಾಂತರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 16 ರಂದು ಅಲ್ಲಿಗೆ ಅವರು ಭೇಟಿ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಇಬ್ಬರು ಹಿಂದೂ ಮಹಿಳೆಯರಿಗೆ "ಪ್ರತಿಯಾಗಿ" ಕನಿಷ್ಠ 10 ಮುಸ್ಲಿಂ ಮಹಿಳೆಯರನ್ನು ಕರೆತನ್ನಿ ಎಂದು ಹೇಳಿರುವುದು ಸೆರೆಯಾಗಿದೆ.
'ಮುಸ್ಲಿಂ ಹುಡುಗಿಯೊಂದಿಗೆ ಓಡಿಹೋಗುವ ಯಾವುದೇ ಹಿಂದೂವಿನ ಮದುವೆಯನ್ನು ನಾನು ಏರ್ಪಡಿಸುತ್ತೇನೆ ಮತ್ತು ಅವರಿಗೆ ಉದ್ಯೋಗದ ವ್ಯವಸ್ಥೆಯನ್ನೂ ಮಾಡುತ್ತೇನೆ' ಎಂದು ಸಿಂಗ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
'ಇದು ಅಖಿಲೇಶ್ ಯಾದವ್ ಅವರ ಸಮಯವಲ್ಲ. ಭಯಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಮುಸ್ಲಿಂ ಹುಡುಗರು ಇಬ್ಬರು ಹಿಂದೂ ಹುಡುಗಿಯರನ್ನು ಮದುವೆಯಾಗುವ ವಿಷಯ ಅಲ್ಲಿಗೆ ಮುಗಿಯುವುದಿಲ್ಲ. ಆ ಇಬ್ಬರ ಬದಲು, ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಹುಡುಗಿಯರನ್ನು ಕರೆತಂದು ಮದುವೆ ಮಾಡಿಕೊಳ್ಳಬೇಕು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ' ಎಂದು ಅವರು ಹೇಳುತ್ತಾರೆ.
ವಿವಾದದ ನಂತರ, ಮಂಗಳವಾರ ಮಾಜಿ ಶಾಸಕರನ್ನು ಅವರ ಹೇಳಿಕೆಗಳ ಬಗ್ಗೆ ಕೇಳಿದಾಗ, ಅವರು ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ.
'ದುಮಾರಿಯಾಗಂಜ್ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ, ಈ ಜನರ ಆಳ್ವಿಕೆಗೆ ಕಡಿವಾಣ ಬಿದ್ದಿದೆ. ಇಲ್ಲದಿದ್ದರೆ, ಹಿಂದೂಗಳು ಭಯದಿಂದ ವಾಸಿಸುತ್ತಿದ್ದ ಹಲವಾರು ಹಳ್ಳಿಗಳಿದ್ದವು ಮತ್ತು ಅಲ್ಲಿನ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ಸುರಕ್ಷಿತವಾಗಿರಲಿಲ್ಲ. ಧಂಖರ್‌ಪುರ ಗ್ರಾಮದಲ್ಲಿ ಮುಸ್ಲಿಮರು ಬಹುಸಂಖ್ಯಾತರಿದ್ದು, ಒಂದು ವಾರದಲ್ಲಿ ಇಬ್ಬರು ಹಿಂದೂಗಳಿಗೆ ಆಮಿಷವೊಡ್ಡಲಾಗಿದೆ ಮತ್ತು ಇಸ್ಲಾಂಗೆ ಮತಾಂತರ ಮಾಡಿಕೊಳ್ಳಲಾಗಿದೆ' ಎಂದು ಅವರು ಹೇಳಿದರು.
'ನಾನು ಅಲ್ಲಿಗೆ ಹೋದೆ ಮತ್ತು ಜನರು ಎಚ್ಚರಗೊಂಡು ಪ್ರತಿದಾಳಿ ನಡೆಸಬೇಕು ಎಂದು ಹೇಳಿದೆ. ಭಯಪಡುವ ಅಗತ್ಯವಿಲ್ಲ. ಸಿದ್ಧರಾಗಿ. ನಾವು ನಿಮ್ಮೊಂದಿಗಿದ್ದೇವೆ..., 'ಇಬ್ಬರು ಹಿಂದೂ ಹುಡುಗಿಯರನ್ನು ಕರೆದೊಯ್ಯಲಾಗಿದ್ದರೆ, ನೀವು ಹತ್ತು ಮುಸ್ಲಿಂ ಹುಡುಗಿಯರನ್ನು ಕರೆತನ್ನಿ. ಮದುವೆಯ ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಮತ್ತು ಅವರ ಭದ್ರತೆಯನ್ನು ಸಹ ಖಾತರಿಪಡಿಸುತ್ತೇವೆ. ಇದು (ಸಮಾಜವಾದಿ ಪಕ್ಷದ ಮುಖ್ಯಸ್ಥ) ಅಖಿಲೇಶ್ ಯಾದವ್ ಅಥವಾ ಮುಸ್ಲಿಂ ತುಷ್ಟೀಕರಣ ಮಾಡುವ ಇತರ ಪಕ್ಷಗಳ ಯುಗವಲ್ಲ. ಇದು ಯೋಗಿ ಜಿ ಯುಗ. ಭಯಪಡುವ ಅಗತ್ಯವಿಲ್ಲ. ನೀವು ಏನು ಬೇಕಾದರೂ ಮಾಡಿ, ನಾವು ನಿಮ್ಮೊಂದಿಗಿದ್ದೇವೆ' ಎಂದರು.
ಸಮಾಜವಾದಿ ಪಕ್ಷ ಖಂಡನೆ
ಈ ಹೇಳಿಕೆಗಳನ್ನು ಖಂಡಿಸಿರುವ ಸಮಾಜವಾದಿ ಪಕ್ಷದ ದುಮಾರಿಯಾಂಗಂಜ್ ಶಾಸಕಿ ಸಯ್ಯದಾ ಖಾಟೂನ್, ಕೋಮು ಅಶಾಂತಿ ಸೃಷ್ಟಿಸುವ ತಂತ್ರದ ಭಾಗವಾಗಿದ್ದಾರೆ. ರಾಘವೇಂದ್ರ ಪ್ರತಾಪ್ ಸಿಂಗ್ ಅವರ ಹೇಳಿಕೆಗಳು ಮಹಿಳೆಯರಿಗೆ ಅವಮಾನ ಉಂಟುಮಾಡಿವೆ. ಅವರು ಮುಸ್ಲಿಮರನ್ನು ಅವಮಾನಿಸುತ್ತಲೇ ಇದ್ದಾರೆ ಮತ್ತು ಅಗೌರವಿಸುತ್ತಿದ್ದಾರೆ. ಮುಸ್ಲಿಮರು ಭಾರತದ ನಾಗರಿಕರಲ್ಲವೇ, ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಅರ್ಪಿಸಲಿಲ್ಲವೇ? ನನ್ನ ದೂರುಗಳ ಹೊರತಾಗಿಯೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತವು ಮೂಕ ಪ್ರೇಕ್ಷಕರಾಗಿದೆ ಮತ್ತು ಏನಾದರೂ ಸಂಭವಿಸಿದರೆ ಅದುವೇ ಜವಾಬ್ದಾರವಾಗಿರುತ್ತದೆ' ಎಂದು ಅವರು ಹೇಳಿದರು.
Advertisement