

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ 6 ದಿನ ಬಾಕಿಯಿರುವಂತೆಯೇ ಜನ್ ಸೂರಾಜ್ ಪಕ್ಷದ ಬೆಂಬಲಿಗರೊಬ್ಬರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಪಾಟ್ನಾದ ಮೊಕಾಮಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ದುಲಾರ್ ಚಂದ್ ಯಾದವ್ ಎಂದು ಗುರುತಿಸಲಾಗಿದೆ. ಅವರು ಜನ್ ಸೂರಾಜ್ ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರ ಪ್ರಚಾರ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾರೆ.
"ಮೊಕಮಾ ತಾಲ್ ಪ್ರದೇಶದಲ್ಲಿ ಪ್ರಚಾರದ ವೇಳೆ ಅಭ್ಯರ್ಥಿಯೊಬ್ಬರ ಬೆಂಬಲಿಗರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸದ ಕಾರಣ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಬುಲೆಟ್ ಗಾಯದಿಂದ ಸಾವನ್ನಪ್ಪಿದ್ದಾರೋ ಅಥವಾ ಆಕಸ್ಮಿಕ ಸಾವೋ ಎಂಬುದು ಪೊಲೀಸರು ಶವ ಪಡೆದ ನಂತರವೇ ತಿಳಿಯಬಹುದು" ಎಂದು ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಕೆ ಶರ್ಮಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಈ ಕ್ಷೇತ್ರದಲ್ಲಿ ಜೆಡಿಯು ನಿಂದ ಅನಂತ್ ಸಿಂಗ್ ಕಣಕ್ಕಿಳಿದಿದ್ದು, ವೀಣಾದೇವಿ RJD ಅಭ್ಯರ್ಥಿಯಾಗಿದ್ದಾರೆ. ನವೆಂಬರ್ 6 ರಂದು ಮೊಕಾಮಾದಲ್ಲಿ ಮತದಾನ ನಡೆಯಲಿದೆ.
Advertisement