

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ನಂತರ ಉಪ ಮುಖ್ಯಮಂತ್ರಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ವ್ಯಕ್ತಿಯನ್ನಾಗಿ ಮಾಡ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳುವ ಮೂಲಕ ನಿತೀಶ್ ಕುಮಾರ್ ಸಿಎಂ ಆಗಲ್ಲ ಎಂಬ ಸುಳಿವು ನೀಡಿದ್ದಾರೆ.
ಚೌಧರಿ ಬಿಜೆಪಿ ಅಭ್ಯರ್ಥಿಯಾಗಿರುವ ಮುಂಗೇರ್ ಜಿಲ್ಲೆಯ ತಾರಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅಮಿತ್ ಶಾ ಈ ಹೇಳಿಕೆ ನೀಡಿದರು.
"ಸಾಮ್ರಾಟ್ ಚೌಧರಿ ತಮ್ಮ ಭಾಷಣದಲ್ಲಿ ಹೇಳಿದಂತೆ ಅವರು ಇಲ್ಲೇ ಹುಟ್ಟಿದ್ದಾರೆ. ಈ ಕ್ಷೇತ್ರವನ್ನು ಸಾಮ್ರಾಟ್ ಚೌಧರಿ ಅವರಿಗೆ ಬಿಟ್ಟುಕೊಡುವಂತೆ ಜೆಡಿಯು ಹಾಲಿ ಶಾಸಕ ರಾಜೀವ್ ಸಿಂಗ್ ಅವರಿಗೆ ಮನವೊಲಿಸಿದ್ದೇವು. ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಾರಾಪುರ ಮತ್ತಿತರ ಕಡೆಗಳ ಜನರು ಮನವಿ ಮಾಡಿದ್ದಾರೆ. ನಿಮ್ಮ ಶಾಸಕರು ರೆಡಿಮೇಡ್ ಉಪ ಮುಖ್ಯಮಂತ್ರಿ ಎಂದರು.
"ದಯವಿಟ್ಟು ಅವರಿಗೆ ಮತ ನೀಡಿ, ಗೆಲ್ಲಿಸಿ, ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೊಡ್ಡ ವ್ಯಕ್ತಿ, ದೊಡ್ಡ ವ್ಯಕ್ತಿಯನ್ನಾಗಿ ಮಾಡ್ತಾರೆ ಎಂದು ಅಮಿತ್ ಶಾ ಹೇಳಿದರು.
ಚುನಾವಣೆ ನಡೆಯುತ್ತಿರುವ ಬಿಹಾರದಲ್ಲಿ ಎನ್ ಡಿಎ ಈ ಬಾರಿ ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡಲ್ಲ. ಬಿಜೆಪಿ ಪಕ್ಷದವರನ್ನು ಸಿಎಂ ಮಾಡ್ತಾದೆ ಎಂದು ಪ್ರತಿಪಕ್ಷಗಳು ಹೇಳುತ್ತಿರುವಂತೆಯೇ ಅಮಿತ್ ಶಾ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹೇಳಿಕೇಳಿ ಬಿಹಾರ ದೇಶದ ಹಿಂದಿ ಹಾರ್ಟ್ ಲ್ಯಾಂಡ್ ಆಗಿದ್ದು, ಈವರೆಗೂ ಬಿಜೆಪಿ ಮುಖ್ಯಮಂತ್ರಿ ಆಗಿಲ್ಲ. ಈ ಹಿಂದೆ ಜೆಡಿಯು ಜೊತೆಗೆ ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳದಲ್ಲಿದ್ದ ಸಾಮ್ರಾಟ್ ಚೌಧರಿ, ದಶಕದ ಹಿಂದೆ ಬಿಜೆಪಿಗೆ ಸೇರಿದಾಗಿನಿಂದ ಪಕ್ಷ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.
ಬಹುಪಾಲು RJD ಬೆಂಬಲಿಗರಾದ ಯಾದವರ ನಂತರ OBC ಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುಶ್ವಾಹ ಸಮುದಾಯವನ್ನು ಸೆಳೆಯುವಲ್ಲಿ ಚೌಧರಿ ಬಿಜೆಪಿಗೆ ಪ್ರಮುಖರಾಗಿದ್ದಾರೆ. ಚೌಧರಿ ಪ್ರಸ್ತುತ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು, ದಶಕದ ನಂತರ ನೇರ ಚುನಾವಣೆಗೆ ಸ್ಪರ್ಧಿಸಿದ್ದಾರೆ.
Advertisement