
ಆಲಪ್ಪುಳ: ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್‌ನಲ್ಲಿರುವ ದೇವಸ್ಥಾನದಲ್ಲಿರುವ ಆನೆಯು ಇಬ್ಬರ ಮಾವುತರ ಮೇಲೆ ದಾಳಿ ನಡೆಸಿದ್ದು, ಓರ್ವ ಸಾವಿಗೀಡಾಗಿದ್ದು, ಮತ್ತೋರ್ವ ಮಾವುತ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೃತರನ್ನು ನೂರಾನಾಡ್‌ನ ಎಡಪ್ಪೊನ್ಮುರಿಯ ನಿವಾಸಿ ಮುರಳೀಧರನ್ ನಾಯರ್ (53) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈತ ಹರಿಪಾದ್‌ನ ಸುಬ್ರಹ್ಮಣ್ಯ ದೇವಸ್ಥಾನದ ಒಡೆತನದ ಸ್ಕಂದನ್ ಎಂಬ ಆನೆಯ ಮುಖ್ಯ ನಿರ್ವಾಹಕನಾಗಿದ್ದ.
ಮದವೇರಿದ್ದ ಆನೆಯನ್ನು ಕಳೆದ ಕೆಲವು ತಿಂಗಳುಗಳಿಂದ ದೇವಾಲಯದ ಅರ್ಚಕರ ಮನೆಯಲ್ಲಿಯೇ ಕಟ್ಟಿಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮದ ಎಂಬುದು ಗಂಡು ಆನೆಗಳಲ್ಲಿ ವಾರ್ಷಿಕವಾಗಿ ಕಂಡುಬರುವ ಆಕ್ರಮಣಶೀಲತೆ ಮತ್ತು ಅನಿರೀಕ್ಷಿತ ನಡವಳಿಕೆಯ ಸ್ಥಿತಿಯಾಗಿದ್ದು, ಈ ಸಮಯದಲ್ಲಿ ಟೆಸ್ಟೋಸ್ಟೆರಾನ್ ಮಟ್ಟದಲ್ಲಿ ಏರಿಕೆ ಕಂಡುಬರುತ್ತದೆ. ಈ ಸಮಯದಲ್ಲಿ ಟೆಂಪೋರಲ್ ಗ್ರಂಥಿಗಳು ಊದಿಕೊಳ್ಳುತ್ತವೆ ಮತ್ತು ಅದರ ಕಣ್ಣು ಮತ್ತು ಕಿವಿಯ ನಡುವಿನ ಭಾಗದಲ್ಲಿ ಸೋರುವುದನ್ನು ಕಾಣಬಹುದು.
ಭಾನುವಾರ ಮಧ್ಯಾಹ್ನ ಸ್ಕಂದನ್ ಆನೆ ಏಕಾಏಕಿಯಾಗಿ ಮತ್ತೊಬ್ಬ ಮಾವುತ ಸುನೀಲ್ ಕುಮಾರ್ ಮೇಲೆ ದಾಳಿ ಮಾಡಿದೆ. ಆಗ ಮುರಳೀಧರನ್ ಸ್ಥಳಕ್ಕೆ ಧಾವಿಸಿ ಆರಂಭದಲ್ಲಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ದಾಳಿಯಲ್ಲಿ ಸುನೀಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮಧ್ಯಾಹ್ನ 3.30 ರ ಸುಮಾರಿಗೆ ಆನೆಯನ್ನು ದೇವಸ್ಥಾನಕ್ಕೆ ಸ್ಥಳಾಂತರಿಸುವಾಗ, ಸ್ಕಂದನ್ ಮತ್ತೆ ಮುರಳೀಧರನ್ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಆನೆ ಮುರಳೀಧರನ್ ಅವರನ್ನು ಹಲವಾರು ನಿಮಿಷಗಳ ಕಾಲ ತನ್ನ ತಲೆಯಿಂದ ನೆಲಕ್ಕೆ ಒತ್ತಿ ಹಿಡಿದಿತ್ತು. ಇತರ ಮಾವುತರು ಆನೆಯನ್ನು ನಿಗ್ರಹಿಸುವಲ್ಲಿ ಯಶಸ್ವಿಯಾದರು ಮತ್ತು ಮುರಳೀಧರನ್ ಅವರನ್ನು ಪರುಮಲದಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ರಾತ್ರಿ 11 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಪಾದ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಸುನಿಲ್ ಕುಮಾರ್ ಅವರ ಸ್ಥಿತಿ ಗಂಭೀರವಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತರ ದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement