
ಹೈದರಾಬಾದ್: ಪಕ್ಷ ವಿರೋಧಿ ಚಟುವಟಿಕೆಗಳಿಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಬಿಆರ್‌ಎಸ್ ಮಂಗಳವಾರ ತನ್ನ ಎಂಎಲ್‌ಸಿ ಕೆ. ಕವಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಕವಿತಾ ಅವರ ತಂದೆ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಕವಿತಾ ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಟಿ ರವೀಂದರ್ ರಾವ್ ಮತ್ತು ಮತ್ತೋರ್ವ ಪ್ರಧಾನ ಕಾರ್ಯದರ್ಶಿ (ಶಿಸ್ತು ವ್ಯವಹಾರಗಳ ಉಸ್ತುವಾರಿ) ಸೋಮ ಭರತ್ ಕುಮಾರ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕವಿತಾ ಅವರ ನಡವಳಿಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳು ಬಿಆರ್‌ಎಸ್‌ಗೆ ಹಾನಿಯನ್ನುಂಟುಮಾಡುತ್ತಿವೆ. ಪಕ್ಷದ ನಾಯಕತ್ವವು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅದು ಹೇಳಿದೆ.
ಸೆಪ್ಟೆಂಬರ್ 1 ರಂದು, ಕೆ. ಕವಿತಾ ಅವರು, ಕಾಳೇಶ್ವರಂ ಯೋಜನೆಯ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿರುವ ತೆಲಂಗಾಣ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸುತ್ತಾ, ಕಾಳೇಶ್ವರಂ ವಿಷಯಕ್ಕೆ ಸಂಬಂಧಿಸಿದಂತೆ ಕೆಸಿಆರ್ ಅವರ ವರ್ಚಸ್ಸಿನ ಮೇಲೆ ಯಾವುದೇ ಕಳಂಕ ಬಂದಿದ್ದರೆ, ಅದಕ್ಕೆ ಬಿಆರ್‌ಎಸ್ ನಾಯಕರಾದ ಹರೀಶ್ ರಾವ್ ಮತ್ತು ಸಂತೋಷ್ ರಾವ್ ಕಾರಣ ಎಂದು ಆರೋಪಿಸಿದರು. ಅವರು ತಮ್ಮ ಮತ್ತು ಕೆಸಿಆರ್ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
'ಸಿಬಿಐ ತನಿಖೆಯಲ್ಲಿ, ಕೆಸಿಆರ್ ಆರೋಪಮುಕ್ತರಾಗಿ ಹೊರಹೊಮ್ಮುತ್ತಾರೆ. ಈ ವಿಚಾರದಲ್ಲಿ ಕೆಸಿಆರ್ ಕಳಂಕಿತರಾಗಿದ್ದರೆ, ಅದಕ್ಕೆ ಹರೀಶ್ ರಾವ್ ಮತ್ತು ಸಂತೋಷ್ ರಾವ್ ಕಾರಣ. ಅವರು ನನ್ನ ವಿರುದ್ಧ ಹಲವಾರು ಪಿತೂರಿಗಳನ್ನು ನಡೆಸಿದ್ದರೂ, ನಾನು ಸಹಿಸಿಕೊಂಡೆ. ಹರೀಶ್ ಮತ್ತು ಸಂತೋಷ್ ರಾವ್ ಹಿಂದೆ, ಖಂಡಿತವಾಗಿಯೂ ರೇವಂತ್ ರೆಡ್ಡಿ ಇದ್ದಾರೆ. ಹರೀಶ್ ರಾವ್ ಮತ್ತು ಸಂತೋಷ್ ರಾವ್ ಅವರ ಕಾರಣದಿಂದಾಗಿ ಕೆಸಿಆರ್ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ' ಎಂದು ಅವರು ಹೇಳಿದರು.
Advertisement