
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರನಗರ ಉಪವಿಭಾಗದಲ್ಲಿರುವ ಜಂಗಂಬಾಗ್‌ನಲ್ಲಿ ಎರಡು ಮನೆಗಳ ಮೇಲೆ ಭೂಕುಸಿತವಾಗಿದ್ದು, ಒಂದೇ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ.
ಮೃತರನ್ನು 35 ವರ್ಷದ ಗುರುಪ್ರೀತ್ ಸಿಂಗ್, ಅವರ ಪತ್ನಿ ಭಾರತಿ (30), ಅವರ ಮೂರು ವರ್ಷದ ಮಗಳು ಕಿರಾತ್, ಶಾಂತಿ ದೇವಿ (70), ಮತ್ತು ಸುರೇಂದರ್ ಕೌರ್ (56) ಎಂದು ಗುರುತಿಸಲಾಗಿದೆ. ಆರನೇ ವ್ಯಕ್ತಿ ಅಪರಿಚಿತನಾಗಿದ್ದಾನೆ. ಭೂ ಕುಸಿತ ಸಂಭವಿಸಿದ ವೇಳೆ ದ್ವಿಚಕ್ರ ವಾಹನದಲ್ಲಿ ಹಾದುಹೋಗುತ್ತಿದ್ದ.
ಮತ್ತೊಬ್ಬ ವ್ಯಕ್ತಿ, ರಾಹಿಲ್ ಕೂಡ ತನ್ನ ವಾಹನದಲ್ಲಿ ತೆರಳುತ್ತಿದ್ದಾಗ ಭೂಕುಸಿತದಲ್ಲಿ ಸಿಲುಕಿಕೊಂಡಿದ್ದು, ಇನ್ನೂ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮೂಲಗಳ ಪ್ರಕಾರ, ನಿನ್ನೆ ತಡರಾತ್ರಿ ಭೂಕುಸಿತ ಸಂಭವಿಸಿದ್ದು, ಎರಡು ಮನೆಗಳಿಗೆ ತೀವ್ರ ಹಾನಿಯಾಗಿದೆ. ಘಟನೆ ನಡೆದ ಸ್ವಲ್ಪ ಸಮಯದ ನಂತರ ಮೂರು ಶವಗಳನ್ನು ಹೊರತೆಗೆಯಲಾಯಿತು. ಇಂದು ಬೆಳಿಗ್ಗೆ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಇನ್ನೂ ಮೂರು ಶವಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆ ಆರಕ್ಕೆ ಏರಿದೆ.
ರಾತ್ರಿಯಿಡೀ ಫ್ಲಡ್‌ಲೈಟ್‌ಗಳ ಅಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ಸ್ಥಳೀಯ ಪೊಲೀಸರ ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಹವಾಮಾನ ವೈಪರೀತ್ಯದ ಹೊರತಾಗಿಯೂ, ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ತೆರವುಗೊಳಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬೆಟ್ಟದ ಇಳಿಜಾರು ಅಸ್ಥಿರವಾಗಿರುವುದರಿಂದ, ಮತ್ತಷ್ಟು ಭೂಕುಸಿತಗಳ ಭೀತಿಯಿಂದಾಗಿ, ಮುನ್ನೆಚ್ಚರಿಕೆ ಕ್ರಮವಾಗಿ, ಹತ್ತಿರದ ಮನೆಗಳನ್ನು ಸ್ಥಳಾಂತರಿಸಲಾಗಿದೆ.
ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಏಳು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,155 ರಸ್ತೆಗಳು ಇನ್ನೂ ಸಂಪರ್ಕ ಕಡಿತಗೊಂಡಿವೆ. ಇವುಗಳಲ್ಲಿ ಮಂಡಿಯಲ್ಲಿ 282, ಶಿಮ್ಲಾದಲ್ಲಿ 234, ಕುಲ್ಲುದಲ್ಲಿ 204, ಸಿರ್ಮೌರ್‌ನಲ್ಲಿ 137, ಸೋಲನ್‌ನಲ್ಲಿ 92, ಕಾಂಗ್ರಾದಲ್ಲಿ 60, ಲಾಹೌಲ್ ಮತ್ತು ಸ್ಪಿತಿಯಲ್ಲಿ 48 ಮತ್ತು ಬಿಲಾಸ್ಪುರ್ ಮತ್ತು ಉನಾದಲ್ಲಿ ತಲಾ 37 ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಹಮೀರ್‌ಪುರದಲ್ಲಿ ಹನ್ನೆರಡು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.ಭಾರಿ ಮಳೆ ಹಿನ್ನೆಲೆ ಶಿಮ್ಲಾ, ಕಾಂಗ್ರಾ ಮತ್ತು ಸಿರಮೌರ್ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 3 (ಮಂಡಿ-ಧರಂಪುರ್ ರಸ್ತೆ ), ರಾಷ್ಟ್ರೀಯ ಹೆದ್ದಾರಿ 305 (ಆಸ್ಟ್-ಸೈಂಜ್), ರಾಷ್ಟ್ರೀಯ ಹೆದ್ದಾರಿ 5 (ಹಳೆಯ ಹಿಂದೂಸ್ತಾನ್-ಟಿಬೆಟ್ ರಸ್ತೆ ) ಮತ್ತು ರಾಷ್ಟ್ರೀಯ ಹೆದ್ದಾರಿ 707 (ಹಟ್ಕೋಟಿ–ಪೋಂಟಾ) ಗಳಲ್ಲಿಯೂ ಸಂಚಾರ ಸ್ಥಗಿತಗೊಂಡಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.
ಶಿಮ್ಲಾದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಉಪ ಆಯುಕ್ತ ಅನುಪಮ್ ಕಶ್ಯಪ್ ಮಂಗಳವಾರ ಸಂಜೆ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
Advertisement