
ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಪಕ್ಷದಿಂದ ಅಮಾನತುಗೊಂಡಿದ್ದ ಕೆ.ಸಿ. ಚಂದ್ರಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಅವರು ಪಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಕೆ ಕವಿತಾ ಅವರನ್ನು ಭಾರತ ರಾಷ್ಟ್ರ ಸಮಿತಿ ಪಕ್ಷದಿಂದ ಮಂಗಳವಾರ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರು ಅಮಾನತುಗೊಳಿಸಿದ್ದರು.
ಕವಿತಾ ಅವರ ಇತ್ತೀಚಿನ ನಡೆ ಮತ್ತು ಅವರ ಪಕ್ಷ ವಿರೋಧಿ ಚಟುವಟಿಕೆಗಳು ಬಿಆರ್‌ಎಸ್‌ಗೆ ಇರಿಸುಮುರಿಸು ಉಂಟು ಮಾಡಿದ್ದವು. ಇದರಿಂದಾಗಿ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಟಿ.ರವೀಂದರ್ ರಾವ್ ಅವರು ಹೇಳಿದ್ದರು.
ಇದರ ಬೆನ್ನಲ್ಲೇ ಪಕ್ಷ ಹಾಗೂ ಎಂಎಲ್'ಸಿ ಸ್ಥಾನಕ್ಕೆ ಕವಿತಾ ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹರೀಶ್ ರಾವ್ ಅವರು ಕೆಸಿಆರ್ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರೊಂದಿಗೆ ಕೈಜೋಡಿಸಿದ್ದಾರೆ, ಈ ಪಿತೂರಿಗಳ ಬಗ್ಗೆ ನನ್ನ ಸಹೋದರ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ನಾನು ಯಾವುದೇ ಹುದ್ದೆಗಳಿಗೆ ಎಂದಿಗೂ ಆಕಾಂಕ್ಷಿಯಾಗಿರಲಿಲ್ಲ. (ಶಾಸಕ ಮಂಡಳಿ) ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ಕಳುಹಿಸುತ್ತಿದ್ದೇನೆ. ಬಿಆರ್‌ಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೂ ನಾನು ರಾಜೀನಾಮೆ ಕಳುಹಿಸುತ್ತಿದ್ದೇನೆಂದು ಹೇಳಿದ್ದಾರೆ.
ಇದೇ ವೇಳೆ ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ಕೇಳಿ ಬಂದ ಅಕ್ರಮ ಕೂಡ ಹರೀಶ್ ರಾವ್ ಮತ್ತು ಸಂತೋಷ್ ರಾವ್ ಅವರೇ ನಡೆಸಿದ್ದು ಎಂದೂ ಕವಿತಾ ಆರೋಪಿಸಿದ್ದಾರೆ.
ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದಡಿ ಬಂಧಿತರಾಗಿದ್ದ ಕವಿತಾ ಅವರು ಸದ್ಯ ಸುಪ್ರೀಂ ಕೋರ್ಟ್ ಮಂಜೂರು ಮಾಡಿದ ಜಾಮೀನಿನ ಮೇಲೆ ಹೊರಗಿದ್ದಾರೆ.
Advertisement