
ಜೈಪುರ: ಅಣೆಕಟ್ಟೆ ಮೇಲಿಂದ ನೀರಿಗೆ ಹಾರಲು ಮುಂದಾಗಿದ್ದ ಯುವತಿಯನ್ನು ವ್ಯಕ್ತಿಯೋರ್ವ ರಕ್ಷಣೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರಾಜಸ್ಥಾನದ ಛಿಪಾ ಬರೋಡ್ ಪಟ್ಟಣದಲ್ಲಿ ಖಜುರಿಯಾ ಲಾಸಿ ಅಣೆಕಟ್ಟಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯನ್ನು ವ್ಯಕ್ತಿಯೋರ್ವ ರಕ್ಷಣೆ ಮಾಡಿದ್ದು, ಈ ರಕ್ಷಣಾ ಕಾರ್ಯಾಚರಣೆಯ ರೋಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಯುವತಿ ಅಣೆಕಟ್ಟೆ ಮೇಲೆ ನಿಂತು ನೀರಿಗೆ ಹಾರಲು ಯತ್ನಿಸುತ್ತಿದ್ದಾಗ ಇದನ್ನು ಕಂಡ ಸ್ಥಳೀಯರು ಗುಂಪುಗೂಡಿದ್ದಾರೆ. ಈ ವೇಳೆ ಕೆಲವರು ಆಕೆಯ ಗಮನ ಬೇರೆಡೆ ಸೆಳೆದು ಆಕೆಯನ್ನು ರಕ್ಷಿಸುವ ಯತ್ನ ಮಾಡಿದರು.
ಮತ್ತೊಂದೆಡೆ ಕೆಳಗೆ ನೀರಿನ ಮೇಲೆ ದೋಣಿಯೊಂದನ್ನು ಬಿಟ್ಟು ಒಂದು ವೇಳೆ ಆಕೆ ನೀರಿಗೆ ಬಿದ್ದರೆ ಆಕೆಯನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಹೊತ್ತಿಗಾಗಲೇ ಸಮಯ ನೋಡಿ ವ್ಯಕ್ತಿಯೋರ್ವ ಆಕೆಯನ್ನು ನೀರಿಗೆ ಬೀಳದಂತೆ ತಡೆದು ರಕ್ಷಿಸಿದ್ದಾರೆ.
ಯುವತಿ ಹಿಂದಕ್ಕಿ ತಿರುಗಿ ನೋಡುತ್ತಿದ್ದಂತೆಯೇ ಓಡಿಬಂದ ವ್ಯಕ್ತಿ ಆಕೆಯ ಕೈಯನ್ನು ಬಿಗಿಯಾಗಿ ಹಿಡಿದು ಎಳೆದುಕೊಂಡಿದ್ದಾನೆ. ಈ ವೇಳೆ ಇತರರು ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಬಂದ ಪೊಲೀಸರಿಗೆ ನಿವಾಸಿಗಳು ತಕ್ಷಣ ಮಾಹಿತಿ ನೀಡಿದರು. ಹುಡುಗಿಯ ಗುರುತು ಅಥವಾ ಅವಳ ಸ್ಥಿತಿಯ ಬಗ್ಗೆ ಅಧಿಕಾರಿಗಳು ಇನ್ನೂ ವಿವರಗಳನ್ನು ಹಂಚಿಕೊಂಡಿಲ್ಲ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಆಕೆಯನ್ನು ರಕ್ಷಿಸಿದ ವ್ಯಕ್ತಿಯ ಸಮಯಪ್ರಜ್ಞೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
ಇನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಪ್ರಕಾರ, 2022 ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 10,000 ಕ್ಕೂ ಹೆಚ್ಚು ಅಪ್ರಾಪ್ತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.
Advertisement