
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾಗುಪ್ತ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಸರ್ಕಾರದ ಅಧಿಕೃತ ಸಭೆಯಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಅವರ ಪತಿ ಮನೀಶ್ ಗುಪ್ತಾ ಕಾಣಿಸಿಕೊಂಡಿದ್ದು, ಬಿಜೆಪಿ ವಿರುದ್ಧ AAP ಹಾಗೂ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸುತ್ತಿವೆ.
ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಭಾನುವಾರ ನಡೆದ ಸಭೆಯಲ್ಲಿ ಸದ್ಯ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಹಾಗೂ ಸ್ಥಿತಿಗತಿ ವರದಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವಂತೆ ರೇಖಾಗುಪ್ತಾ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ತನ್ನ ಪತಿಯೊಂದಿಗೆ ಸಭೆ ನಡೆಸಿರುವ ಪೋಟೋವನ್ನು ರೇಖಾಗುಪ್ತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ದೆಹಲಿ ಸರ್ಕಾರದ ಯಾವುದೇ ಭಾಗವಾಗದಿದ್ದರೂ ಸರ್ಕಾರದ ಅಧಿಕೃತ ಸಭೆಯಲ್ಲಿ ಭಾಗವಹಿಸಲು ಹೇಗೆ ರೇಖಾಗುಪ್ತಾ ಅವಕಾಶ ನೀಡಿದರು ಎಂದು ಎಎಪಿ ಉಸ್ತುವಾರಿ ಸೌರಬ್ ಭಾರದ್ವಾಜ್ ಪ್ರಶ್ನಿಸಿದ್ದಾರೆ.
ದೆಹಲಿ ಸರ್ಕಾರ ಫುಲೇರಾ ಪಂಚಾಯತ್ ಆಗುತ್ತಿದೆ. ಇಲ್ಲಿ ಮಹಿಳೆಯರು ಮುಖ್ಯಸ್ಥರಾಗಿದ್ದರೆ ಅವರ ಪತ್ನಿ ಅಧಿಕಾರ ಚಲಾಯಿಸುತ್ತಾರೆ. ಅದೇ ರೀತಿಯಲ್ಲಿ ಇಂದು ದೆಹಲಿಯಲ್ಲಿ ಸಿಎಂ ಪತಿ ಸರ್ಕಾರದ ಅಧಿಕೃತ ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂದು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದಾರೆಯೇ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. ದೆಹಲಿ ಸರ್ಕಾರವನ್ನು ರೇಖಾ ಗುಪ್ತ ನಡೆಸುತ್ತಿದ್ದಾರೆಯೇ ಅಥವಾ ಅವರ ಪತಿ ನಡೆಸುತ್ತಿದ್ದಾರೆಯೇ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
Advertisement