
ನವದೆಹಲಿ: ಏಳು ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ, ಹೆಚ್ಚುವರಿಯಾಗಿ ನಾಲ್ಕು ವರ್ಷ ಏಳು ತಿಂಗಳು ಜೈಲಿನಲ್ಲಿರಿಸಲ್ಪಟ್ಟ ಅಪರಾಧಿಗೆ ₹25 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು, ಮಧ್ಯಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಅಪರಾಧಿ ಸೋಹನ್ ಸಿಂಗ್ ಪರ ವಾದ ಮಂಡಿಸಿದ ವಕೀಲ ಮಹ್ಫೂಜ್ ನಜ್ಕಿ, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಪೂರ್ಣಗೊಂಡ ನಂತರವೂ ಸಿಂಗ್ ಅವರು ನಾಲ್ಕು ವರ್ಷ ಏಳು ತಿಂಗಳು ಹೆಚ್ಚುವರಿಯಾಗಿ ಜೈಲಿನಲ್ಲಿ ಕಳೆದಿದ್ದಾರೆ. ಅವರು ಒಟ್ಟು 11 ವರ್ಷ 7 ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ. ಸ್ವಲ್ಪ ಸಮಯ ಮಾತ್ರ ಜಾಮೀನಿನ ಮೇಲೆ ಹೊರಗಿದ್ದರು. ಆದರೆ, ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆ ಕೇವಲ 7 ವರ್ಷಗಳು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ವಿಷಯದಲ್ಲಿ ತಪ್ಪುದಾರಿಗೆಳೆಯುವ ಅಫಿಡವಿಟ್‌ಗಳನ್ನು ಸಲ್ಲಿಸಿದ್ದಕ್ಕಾಗಿ ರಾಜ್ಯದ ಪರ ವಕೀಲರನ್ನು ಪ್ರಶ್ನಿಸುವುದರ ಜೊತೆಗೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತು. ಇದೇ ರೀತಿಯ ಸನ್ನಿವೇಶಗಳಲ್ಲಿರುವ ಇತರ ಜನರನ್ನು ಗುರುತಿಸುವಂತೆ ಮಧ್ಯಪ್ರದೇಶ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು.
ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆಗಸ್ಟ್ 27 ರಂದು ಮಧ್ಯಪ್ರದೇಶ ಸರ್ಕಾರದಿಂದ ವಿವರಣೆಯನ್ನು ಕೇಳಿತ್ತು.
ಹಲವು ಸಂದರ್ಭಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸುವಾಗ, ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಅಪರಾಧಿಗಳನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಮಧ್ಯಪ್ರದೇಶ ನ್ಯಾಯಾಲಯವು ಜೈಲು ಶಿಕ್ಷೆಯನ್ನು ಕಡಿಮೆ ಮಾಡಿದ ಹೊರತಾಗಿಯೂ, ಅಪರಾಧಿ ಸಿಂಗ್ 2025ರ ಜೂನ್ 6 ರವರೆಗೆ ಜೈಲಿನಲ್ಲಿಯೇ ಇದ್ದರು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
'ಏಳು ವರ್ಷಗಳ ಸಂಪೂರ್ಣ ಶಿಕ್ಷೆಯನ್ನು ಅನುಭವಿಸಿದ ನಂತರವೂ ಅರ್ಜಿದಾರರು ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಏಕೆ ಇದ್ದರು ಮತ್ತು ಅಂತಹ ಗಂಭೀರ ಲೋಪ ಹೇಗೆ ಸಂಭವಿಸಿತು ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ರಾಜ್ಯ (ಮಧ್ಯಪ್ರದೇಶ) ಸೂಕ್ತ ವಿವರಣೆಯನ್ನು ನೀಡಬೇಕೆಂದು ನಾವು ಬಯಸುತ್ತೇವೆ' ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಆಗಸ್ಟ್ 22 ರಂದು ಹೇಳಿದೆ.
ಎರಡು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ ಮತ್ತು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಿದೆ.
ಅಪರಾಧಿ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅತ್ಯಾಚಾರ ಸೇರಿದಂತೆ ಇತರ ಅಪರಾಧಗಳಿಗಾಗಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಖುರೈನಲ್ಲಿರುವ ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ನಂತರ ಸಿಂಗ್ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಶಿಕ್ಷೆಯನ್ನು ಪ್ರಶ್ನಿಸಿದರು. ನ್ಯಾಯಾಲಯವು ಜೈಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಿಂದ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸುವ ಮೂಲಕ ಅವರ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿತು.
Advertisement