
ಕಠ್ಮಂಡು: ನೇಪಾಳದಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರ ನೇತೃತ್ವದ ಮಾರಣಾಂತಿಕ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಬೆನ್ನಲ್ಲೇ, ಭಾರತ ಗಡಿಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ. ತಮ್ಮ ನಿವಾಸಿಗಳಿಗೆ ಸಹಾಯ ಮಾಡಲು ಹಲವಾರು ರಾಜ್ಯಗಳು ವಿಶೇಷ ಸೆಲ್‌ಗಳನ್ನು ಪ್ರಾರಂಭಿಸಿವೆ.
ನೇಪಾಳದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜೆನ್-ಝಡ್ ಯುವಕರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಈ ಮಧ್ಯೆ ಸಾಮಾಜಿಕ ಮಾಧ್ಯಮದ ಮೇಲಿನ ಸರ್ಕಾರದ ನಿಷೇಧವನ್ನು ಸೋಮವಾರ ರಾತ್ರಿ ತೆಗೆದುಹಾಕಲಾದ ಹಿನ್ನೆಲೆಯಲ್ಲಿ ನೂರಾರು ಚಳವಳಿಗಾರರು ಓಲಿ ಅವರ ರಾಜೀನಾಮೆಗೆ ಒತ್ತಾಯಿಸಿ ಅವರ ಕಚೇರಿಗೆ ಪ್ರವೇಶಿಸಿದ ನಂತರ ಅಶಾಂತಿ ಭುಗಿಲೆದ್ದಿದೆ. ಪ್ರತಿಭಟನಾಕಾರರು ಸಂಸತ್ತು, ಅಧ್ಯಕ್ಷರ ಕಚೇರಿ, ಪ್ರಧಾನ ಮಂತ್ರಿಗಳ ನಿವಾಸ, ಸರ್ಕಾರಿ ಕಟ್ಟಡಗಳು ಮತ್ತು ರಾಜಕೀಯ ನಾಯಕರ ಕಚೇರಿಗಳನ್ನು ಸಹ ಸುಟ್ಟುಹಾಕಿದ್ದಾರೆ.
ನೇಪಾಳದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ, ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಲಾಗುವುದು ಎಂದು ಆಶಿಸುತ್ತಿದೆ ಎಂದು ಹೇಳಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ಬಗ್ಗೆ ಮಾತನಾಡಿದ್ದು ತಮ್ಮ ರಾಜ್ಯದ 200 ಮಂದಿ ನೇಪಾಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದರೆ, ಕರ್ನಾಟಕದ ಪ್ರವಾಸಿಗರೊಬ್ಬರು ಕಠ್ಮಂಡುವಿನಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದಾರೆ.
ತನ್ನ ಸಹೋದರಿಯೊಂದಿಗೆ ಕೈಲಾಸ-ಮಾನಸ ಸರೋವರ ಯಾತ್ರೆಗೆ ಹೋಗಿದ್ದ ಗೌರಿ ಕೆ, ಹೋಟೆಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರೊಂದಿಗೆ ತಾನು ಸಿಲುಕಿಕೊಂಡಿದ್ದೇನೆ ಎಂದು ಹೇಳಿದರು.
"ಇಂದು ನಮಗೆ ವಿಮಾನವಿತ್ತು, ಆದರೆ ಕಠ್ಮಂಡುವಿನಲ್ಲಿನ ಅಶಾಂತಿಯಿಂದಾಗಿ, ಎಲ್ಲಾ ವಿಮಾನಯಾನ ಕಂಪನಿಗಳು ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ. ನಾನು ಈಗ ಈ ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದೇನೆ" ಎಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಚೆನ್ನೈ ನಿವಾಸಿ ಗೌರಿ ಕಠ್ಮಂಡುವಿನಿಂದ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಅವರ ಪ್ರಕಾರ, ಬೆಂಗಳೂರಿನ ಸುಮಾರು 20 ಮಂದಿ ಸೇರಿದಂತೆ 150 ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಹೋಟೆಲ್‌ನಲ್ಲಿ ತಂಗಿದ್ದರು. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೊ ಮತ್ತು ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗಳು ಬುಧವಾರ ನಗರದ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಕಠ್ಮಂಡುವಿಗೆ ಮತ್ತು ಅಲ್ಲಿಂದ ಹೊರಡುವ ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ.
ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬುಧವಾರ ದೆಹಲಿಯಿಂದ ಕಠ್ಮಂಡುವಿಗೆ ತನ್ನ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
"ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ದೆಹಲಿ-ಕಠ್ಮಂಡು ಮೈತ್ರಿ ಬಸ್ ಸೇವೆ ಎಂದು ಕರೆಯಲ್ಪಡುವ ಈ ಸೇವೆಯು ಭಾರತ ಮತ್ತು ನೇಪಾಳ ನಡುವಿನ ಬಲವಾದ ಸಂಬಂಧವನ್ನು ಸಂಕೇತಿಸುತ್ತದೆ ಮತ್ತು ಪ್ರಯಾಣಿಕರಿಗೆ ಜನಪ್ರಿಯ ಆಯ್ಕೆಯಾಗಿ ಉಳಿದಿದೆ. ನಾವು ಇದೀಗ ಅದನ್ನು ಸ್ಥಗಿತಗೊಳಿಸುತ್ತಿದ್ದೇವೆ ಮತ್ತು ಪರಿಸ್ಥಿತಿ ಸಾಮಾನ್ಯವಾದ ನಂತರ ಅದನ್ನು ಪುನರಾರಂಭಿಸುತ್ತೇವೆ" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು. ಏತನ್ಮಧ್ಯೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೇಪಾಳದ ಗಡಿ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement