
ಲಂಡನ್: ಯುಕೆಯಲ್ಲಿ ಇಬ್ಬರು ಪುರಷರ ಗ್ಯಾಂಗ್ ವೊಂದು ಭಾರತ ಮೂಲದ ಸಿಖ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದು, ಮಾತ್ರವಲ್ಲದೇ ಆಕೆಯನ್ನು 'ಮೊದಲು ನಿನ್ನ ದೇಶಕ್ಕೆ ತೊಲಗು' ಎಂದು ಮೂದಲಿಸಿದ್ದಾರೆ.
ಹೌದು.. ಬ್ರಿಟನ್ ನ ಓಲ್ಡ್‌ಬರಿ ಪಟ್ಟಣದಲ್ಲಿ ಇಪ್ಪತ್ತರ ಹರೆಯದ ಸಿಖ್ ಮಹಿಳೆಯ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಜನಾಂಗೀಯ ಟೀಕೆ ಮಾಡಿದ್ದಾರೆ. ದಾಳಿಕೋರರು ಮಹಿಳೆಗೆ "ನಿನ್ನ ಸ್ವಂತ ದೇಶಕ್ಕೆ ಹಿಂತಿರುಗಿ" ಎಂದು ಹೇಳಿದ್ದಾರೆ, ಇದು ಭಾರತೀಯ ಮೂಲದ ವಲಸಿಗರ ಮೇಲಿನ ಇದೇ ರೀತಿಯ ಘಟನೆಯನ್ನು ಪ್ರತಿಬಿಂಬಿಸುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ಕಳೆದ ಮಂಗಳವಾರ ಬೆಳಿಗ್ಗೆ 8:30 ರ ಸುಮಾರಿಗೆ ಓಲ್ಡ್‌ಬರಿಯ ಟೇಮ್ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಮಹಜರು ಮಾಡಿದ್ದು, ಸಿಸಿಟಿವಿ ಮತ್ತು ವಿಧಿವಿಜ್ಞಾನ ವಿಚಾರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಪೊಲೀಸರು ಇದನ್ನು 'ಜನಾಂಗೀಯವಾಗಿ ಉಲ್ಬಣಗೊಂಡ' ದಾಳಿ ಎಂದು ಪರಿಗಣಿಸುತ್ತಿದ್ದಾರೆ ಮತ್ತು ದಾಳಿಕೋರರನ್ನು ಪತ್ತೆಹಚ್ಚಲು ಸಹಾಯಕ್ಕಾಗಿ ಸ್ಥಳೀಯರನ್ನು ಒತ್ತಾಯಿಸಿದ್ದಾರೆ. ಶಂಕಿತರನ್ನು "ಬಿಳಿ ಪುರುಷರು" ಎಂದು ಗುರುತಿಸಲಾಗಿದ್ದು, ಒಬ್ಬರು ತಲೆ ಬೋಳಿಸಿಕೊಂಡ ಮತ್ತು ಗಾಢ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರೆ, ಇನ್ನೊಬ್ಬ ಶಂಕಿತ ಬೂದು ಬಣ್ಣದ ಟಾಪ್ ಧರಿಸಿದ್ದರು ಎಂದು ವರದಿಯಾಗಿದೆ.
ಈ ಘಟನೆ ಯುಕೆಯಲ್ಲಿನ ಸ್ಥಳೀಯ ಸಿಖ್ ಸಮುದಾಯವನ್ನು ಕೆರಳಿಸಿದ್ದು, ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ದಾಳಿ ಎಂದು ಪರಿಗಣಿಸಲಾಗುತ್ತಿದೆ. ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಕೋಪವು "ಸಂಪೂರ್ಣವಾಗಿ ಅರ್ಥವಾಗುವಂತಹದ್ದಾಗಿದೆ".. ಆದರೆ ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್ ಈ ಘಟನೆಯನ್ನು ಖಂಡಿಸಿದ್ದು, ಇತ್ತೀಚಿನ ದಿನಗಳಲ್ಲಿ "ಬಹಿರಂಗ ಜನಾಂಗೀಯತೆ" ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಎಂದು ಹೇಳಿದ್ದಾರೆ.
Advertisement