
ನವದೆಹಲಿ: ನೈಋತ್ಯ ದೆಹಲಿಯ ಧೌಲಾ ಕುವಾನ್‌ನಲ್ಲಿ ಬೈಕ್ ಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅವರ ಪತ್ನಿ ಗಾಯಗೊಂಡಿದ್ದಾರೆ.
ಭಾನುವಾರ ಮಧ್ಯಾಹ್ನ ದಂಪತಿಗಳು ಸೆಂಟ್ರಲ್ ದೆಹಲಿಯ ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತನಿಖೆಗಾಗಿ ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಮೆಟ್ರೋ ಪಿಲ್ಲರ್ ಸಂಖ್ಯೆ 67ರ ಬಳಿ ಡಿವೈಡರ್ ಪಕ್ಕಕ್ಕೆ ತಿರುಗಿರುವ ಬಿಎಂಡಬ್ಲ್ಯೂ ಕಾರು ಮತ್ತು ಮೋಟಾರ್ ಬೈಕ್ ಕಂಡುಬಂದಿದೆ.
ಪ್ರತ್ಯಕ್ಷದರ್ಶಿಗಳು ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ. ಕಾರು ಚಲಾಯಿಸುತ್ತಿದ್ದ ಮಹಿಳೆ ಮತ್ತು ಅವರ ಪತಿ ಟ್ಯಾಕ್ಸಿ ಬಾಡಿಗೆಗೆ ಪಡೆದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು.
"ರಸ್ತೆ ಅಪಘಾತದಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯಿಂದ ನಮಗೆ ಕರೆ ಬಂದಿತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್(52) ಎಂದು ಗುರುತಿಸಲಾಗಿದೆ.
ಈ ಸಂಬಂಧ ಬಿಎನ್‌ಎಸ್‌ನ ಸೆಕ್ಷನ್ 281, 125 ಬಿ, 105 ಮತ್ತು 238 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement