
ಚಾಮರಾಜನಗರ: ಲಾರಿ, ಕಾರು ಹಾಗೂ ಬೈಕ್ ನಡುವೆ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಬಾಲಕರು ಸಾವಿಗೀಡಾಗಿದ್ದು, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಚಾಮರಾಜನಗರದ ಗುಳಿಪುರ ಬಳಿಯ ರಿಂಗ್ ರಸ್ತೆಯಲ್ಲಿ, ಕರಿವರದರಾಜ ಬೆಟ್ಟಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಹುಡುಗರು ಸ್ಕೂಟರ್ ಸವಾರಿ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಮೃತರನ್ನು ಗುಳಿಪುರ ಪ್ರದೇಶದ ಮೆಹ್ರಾನ್ (13) ಮತ್ತು ಅದ್ನಾನ್ ಪಾಷಾ (9) ಮತ್ತು ಚಾಮರಾಜನಗರದ ಕೆಪಿ ಮೊಹಲ್ಲಾದ ರಾಯನ್ (8) ಎಂದು ಗುರುತಿಸಲಾಗಿದೆ. ಸ್ಕೂಟರ್‌ನಲ್ಲಿದ್ದ ಫೈಜಲ್ (11) ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಕಡೆಗೆ ಹೋಗುತ್ತಿದ್ದ ಕಾರು ಮತ್ತು ಚಾಮರಾಜನಗರ ಕಡೆಗೆ ಬರುತ್ತಿದ್ದ ಲಾರಿ ನಡುವೆ ಸ್ಕೂಟರ್ ಸಿಕ್ಕಿಹಾಕಿಕೊಂಡಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಹ್ರಾನ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮತ್ತಿಬ್ಬರು ಸಾವಿಗೀಡಾದರು. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರು ಮತ್ತು ಲಾರಿ ಚಾಲಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement