
ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ನಿಗೂಢ ಚೀಲದಲ್ಲಿ ನಗ್ನಸ್ಥಿತಿಯಲ್ಲಿ ಮಹಿಳೆಯ ಶವಪತ್ತೆಯಾಗಿದೆ.
ಹೌದು.. ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯ ಕಿಸ್ಮತ್‌ಪುರ ಸೇತುವೆಯ ಕೆಳಗೆ ಮಹಿಳೆಯೊಬ್ಬ ನಗ್ನ ಶವ ಪ್ಲಾಸ್ಟಿಕ್ ಚೀಲವೊಂದರಲ್ಲಿ ಪತ್ತೆಯಾಗಿದ್ದು, ಶವ ಪತ್ತೆಯಾಗುವ ಸುಮಾರು ಮೂರು ದಿನಗಳ ಮೊದಲು ಆಕೆಯನ್ನು ಕೊಲೆ ಮಾಡಲಾಗಿದೆ.
ಅಧಿಕಾರಿಗಳು ಮೃತ ಮಹಿಳೆಯ ವಯಸ್ಸು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಎಂದು ಅಂದಾಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯ ಕಿಸ್ಮತ್‌ಪುರ ಸೇತುವೆಯ ಕೆಳಗೆ ಅನುಮಾನಾಸ್ಪದ ಸ್ಥಿತಿಯಲ್ಲಿದ್ದ ಪ್ಲಾಸ್ಚಿಕ್ ಚೀಲದಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಈ ಪ್ರಕರಣ ಇಡೀ ನಗರವನ್ನು ಬೆಚ್ಚಿ ಬೀಳಿಸಿದೆ.
ಲೈಂಗಿಕ ದೌರ್ಜನ್ಯ ಶಂಕೆ
ಇನ್ನು ದೇಹದ ಮೇಲೆ ಬಟ್ಟೆ ಇಲ್ಲದ ಕಾರಣ, ಮಹಿಳೆಯನ್ನು ಕೊಲ್ಲುವ ಮೊದಲು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯರಿಂದ ವಿಚಾರ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳ ಮಹಜರು ನಡೆಸಿ ಸಾಕ್ಷ್ಯ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ವಿಶೇಷ ಸುಳಿವುಗಳ ತಂಡವು ಸಂಭಾವ್ಯ ಶಂಕಿತರನ್ನು ಗುರುತಿಸಲು ಹತ್ತಿರದ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಗಂಭೀರತೆಯನ್ನು ಒತ್ತಿ ಹೇಳಿದ್ದು, ಎಲ್ಲಾ ಸಂಭಾವ್ಯ ಕೋನಗಳನ್ನು ಕೂಲಂಕಷವಾಗಿ ತನಿಖೆ ಮಾಡಲು ಮೀಸಲಾದ ತಂಡವನ್ನು ರಚಿಸಿದ್ದಾರೆ. ತನಿಖೆಗೆ ಸಹಾಯವಾಗುವ ಯಾವುದೇ ಮಾಹಿತಿಯೊಂದಿಗೆ ಮುಂದೆ ಬರುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಂತ್ರಸ್ಥೆಯ ಗುರುತು ಇನ್ನೂ ದೃಢಪಟ್ಟಿಲ್ಲ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಚಾರ ಮಾಡಿ ತೀವ್ರ ಹಲ್ಲೆ!
ಇನ್ನು ಸಂತ್ರಸ್ಥೆಯ ದೇಹದ ಮೇಲೆ ಯಾವುದೇ ಇರಿತದ ಗಾಯಗಳು ಕಂಡುಬಂದಿಲ್ಲ. ಹೀಗಾಗಿ ದೊಣ್ಣೆಗಳು ಮತ್ತು ಕಲ್ಲುಗಳನ್ನು ಬಳಸಿ ಆಕೆಯನ್ನು ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
"ಅಪರಾಧ ನಡೆದ ಸ್ಥಳದಿಂದ ಸುಮಾರು 150 ಮೀಟರ್ ದೂರದಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ, ಆದರೆ ಅದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತನಿಖೆಯನ್ನು ವೇಗಗೊಳಿಸಲು ನಾವು ಪ್ರಸ್ತುತ ಹೆಚ್ಚಿನ ದೃಢವಾದ ಸುಳಿವುಗಳನ್ನು ಹುಡುಕುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯ ಶವವನ್ನು ಎಸೆಯಲ್ಪಟ್ಟ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೆಲವು ಬಟ್ಟೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement