
ಲಕ್ನೋ: ಶಾಲಾ ಮುಖ್ಯಶಿಕ್ಷಕರೊಬ್ಬರು ತಮ್ಮನ್ನು ಪ್ರಶ್ನಿಸಿದ ಶಿಕ್ಷಣಾಧಿಕಾರಿಗೇ ಬೆಲ್ಟ್ ನಲ್ಲಿ ಬಾರಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮಂಗಳವಾರ ಸಂಜೆ ಉತ್ತರ ಪ್ರದೇಶದ ಸೀತಾಪುರದ ಮೂಲಭೂತ ಶಿಕ್ಷಾ ಅಧಿಕಾರಿ (ಬಿಎಸ್ಎ) ಕಚೇರಿಯಲ್ಲಿ ಮುಖ್ಯೋಪಾಧ್ಯಾಯರೊಬ್ಬರು ಬಿಎಸ್ಎ ಅಖಿಲೇಶ್ ಪ್ರತಾಪ್ ಸಿಂಗ್ ಅವರನ್ನು ಅವರ ಕಚೇರಿಯಲ್ಲೇ ಬೆಲ್ಟ್ ನಲ್ಲಿ ಬಾರಿಸಿದ್ದಾರೆ.
ಮುಖ್ಯೋಪಾಧ್ಯಾಯರ ವಿರುದ್ಧ ದಾಖಲಾಗಿದ್ದ ದೂರುಗಳ ಕುರಿತು ಸ್ಪಷ್ಟೀಕರಣ ಪಡೆಯಲು ಕಚೇರಿಗೆ ಕರೆಸಿದ್ದ ವೇಳೆ ಮುಖ್ಯಶಿಕ್ಷಕರು ಅಧಿಕಾರಿ ಮೇಲೆ ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ 33 ಸೆಕೆಂಡುಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹಲ್ಲೆ ಮಾಡಿದ ಮುಖ್ಯಶಿಕ್ಷಕರನ್ನು ಮಹಮೂದಾಬಾದ್ ಬ್ಲಾಕ್‌ನ ನಡ್ವಾ ವಿಶೇಶ್ವರ್‌ಗಂಜ್‌ನಲ್ಲಿರುವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬ್ರಿಜೇಂದ್ರ ಕುಮಾರ್ ವರ್ಮಾ ಎಂದು ಗುರುತಿಸಲಾಗಿದೆ. ಶಾಲೆಯ ಮಹಿಳಾ ಶಿಕ್ಷಕಿಯೊಬ್ಬರು ನೀಡಿದ ದೂರುಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಬಿಎಸ್ಎ ಕಚೇರಿಗೆ ಬ್ರಿಜೇಂದ್ರ ಕುಮಾರ್ ಆಗಮಿಸಿದ್ದರು.
ಈ ವೇಳೆ ಬ್ರಿಜೇಂದ್ರ ಕುಮಾರ್ ನೀಡಿದ್ದ ಸ್ಪಷ್ಟೀಕರಣದಿಂದ ಶಿಕ್ಷಾ ಅಧಿಕಾರಿ ಅಖಿಲೇಶ್ ಪ್ರತಾಪ್ ಸಿಂಗ್ ಅತೃಪ್ತರಾಗಿದ್ದರು. ಈ ವೇಳೆ ಅವರ ವಿರುದ್ಧ ಗದರಿದಾಗ ಆಕ್ರೋಶಗೊಂಡ ಮುಖ್ಯಶಿಕ್ಷಕ ಬ್ರಿಜೇಂದ್ರ ಕುಮಾರ್ ವರ್ಮಾ ನೋಡ ನೋಡುತ್ತಲೇ ತನ್ನ ಬೆಲ್ಟ್ ತೆಗೆದು ಬಿಎಸ್ಎ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಮೇಜಿನ ಮೇಲೆ ಫೈಲ್ ಎಸೆದು ಬೆಲ್ಟ್ ತೆಗೆದು ಆರು ಸೆಕೆಂಡ್ ನಲ್ಲಿ ಐದು ಬಾರಿ ಅಧಿಕಾರಿಯನ್ನು ಥಳಿಸಿದ್ದಾರೆ. ಈ ವೇಳೆ ಕಚೇರಿಯೊಳಗಿದ್ದ ಸಹಾಯಕರೊಬ್ಬರು ಬ್ರಿಜೇಂದ್ರ ಕುಮಾರ್ ವರ್ಮಾರನ್ನು ತಡೆದು ಹಿಡಿದುಕೊಂಡಿದ್ದಾರೆ. ಬಿಎಸ್ಎ ಅಧಿಕಾರಿ ಸಿಂಗ್ ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಮುಖ್ಯೋಪಾಧ್ಯಾಯರು ಅವರ ಮೊಬೈಲ್ ಫೋನ್ ಕಸಿದು ಅದನ್ನು ಒಡೆದು ಹಾಕಿದ್ದಾರೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಗುಮಾಸ್ತ ಪ್ರೇಮ್ ಶಂಕರ್ ಮೌರ್ಯ ಅವರ ಮೇಲೂ ಹಲ್ಲೆ ಮಾಡಿದ್ದಾರೆ.
ಇನ್ನು ವಿಚಾರ ತಿಳಿಯುತ್ತಲೇ ಕಚೇರಿಗೆ ಆಗಮಿಸಿದ ಪೊಲೀಸರು ಆರೋಪಿ ಮುಖ್ಯಶಿಕ್ಷಕ ಬ್ರಿಜೇಂದ್ರ ಕುಮಾರ್ ವರ್ಮಾ ರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಠಾಣೆಯ ಉಸ್ತುವಾರಿ ಅಧಿಕಾರಿ ಅನುಪ್ ಶುಕ್ಲಾ, 'ಒಡೆದ ಫೋನ್, ಹರಿದ ಫೈಲ್‌ಗಳು ಮತ್ತು ಹಲ್ಲೆಗೆ ಬಳಸಲಾದ ಬೆಲ್ಟ್ ಸೇರಿದಂತೆ ಹಲವು ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೃಢಪಡಿಸಿದರು.
ಬಿಎಸ್ಎ ದೂರು ಮತ್ತು ಪ್ರಾಥಮಿಕ ವರದಿಯ ಆಧಾರದ ಮೇಲೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ಅಂತೆಯೇ ಹಲ್ಲೆಗೊಳಗಾದ ಬಿಎಸ್ಎ ಅಧಿಕಾರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಶಿಕ್ಷಾ ಅಧಿಕಾರಿ ಕೂಡ ದೂರು ನೀಡಿದ್ದು, ದೂರಿನಲ್ಲಿ ಹಲ್ಲೆ, ಕೊಲೆ ಯತ್ನ, ಬೆದರಿಕೆ ಮತ್ತು ಅಧಿಕೃತ ಕೆಲಸಕ್ಕೆ ಅಡ್ಡಿಪಡಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಆರೋಪ ನಿರಾಕರಿಸಿದ ಮುಖ್ಯಶಿಕ್ಷಕ
ಇನ್ನು ಪೊಲೀಸ್ ಕಸ್ಟಡಿಯಲ್ಲಿರುವ ಮುಖ್ಯಶಿಕ್ಷಕ ಬ್ರಿಜೇಂದ್ರ ವರ್ಮಾ ಅವರು ಬಿಎಸ್ಎ ಮೇಲೆ ಕಿರುಕುಳದ ಆರೋಪ ಹೊರಿಸಿದ್ದಾರೆ, ಮಹಿಳಾ ಶಿಕ್ಷಕಿಯೊಬ್ಬರ ವಿವಾದಗಳಿಗೆ ಸಂಬಂಧಿಸಿದಂತೆ ಸಿಂಗ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಇಂದು ಸ್ಪಷ್ಟೀಕರಣದ ಸಮಯದಲ್ಲಿ, ವಾದವು ಉಲ್ಬಣಗೊಂಡಿತು ಮತ್ತು ಇಬ್ಬರೂ ಜಗಳ ಮಾಡಿದೆವು. ಆತ ಕೂಡ ತನ್ನ ಮೇಲೆ ಹಲ್ಲೆ ಮಾಡಿದ ಪ್ರತಿ ಆರೋಪ ಮಾಡಿದ್ದಾರೆ.
Advertisement