
ಅನಂತಪುರಂ: ಶಾಲೆಯ ಅಡುಗೆ ಮನೆಯಲ್ಲಿ ಇರಿಸಲಾಗಿದ್ದ ಕುದಿಯುತ್ತಿದ್ದ ಹಾಲಿನ ಪಾತ್ರೆಯಲ್ಲಿ ಆಕಸ್ಮಿಕವಾಗಿ ಬಿದ್ದು ಒಂದೂವರೆ ವರ್ಷದ ಬಾಲಕಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂ ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ದುರ್ಘಟನೆಯಲ್ಲಿ 17 ತಿಂಗಳ ಅಕ್ಷಿತಾ ಎಂಬ ಪುಟ್ಟ ಮಗು ಸಾವನ್ನಪ್ಪಿದೆ.
ಮೂಲಗಳ ಪ್ರಕಾರ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ತನ್ನ ತಾಯಿಯೊಂದಿಗೆ ಮಗು ಇತ್ತು. ಆದರೆ ತಾಯಿಯ ಕಣ್ತಪ್ಪಿಸಿ ಶಾಲೆಯ ಅಡುಗೆಮನೆಗೆ ಹೋಗಿ ಅಲ್ಲಿ ಬಿಸಿ ಹಾಲಿನ ಪಾತ್ರೆಗೆ ಬಿದ್ದಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳಿಗೆ ವಿತರಿಸಲು ಹಾಲು ಕಾಯಿಸಿ ಇಡಲಾಗಿತ್ತು. ಈ ವೇಳೆ ಅಕ್ಷಿತಾ ಮತ್ತು ಆಕೆಯ ತಾಯಿ ಕೃಷ್ಣವೇಣಿ ಅಡುಗೆಮನೆಯಿಂದ ಸ್ವಲ್ಪ ಸಮಯ ಹೊರಗೆ ಹೋಗಿ ಹಿಂತಿರುಗಿದರು. ಮಗು ತನ್ನ ತಾಯಿ ಇಲ್ಲದ ಹೊತ್ತಿನಲ್ಲೇ ಕೋಣೆಗೆ ಮತ್ತೆ ಪ್ರವೇಶಿಸಿದೆ. ಅಲ್ಲಿದ್ದ ಬೆಕ್ಕನ್ನು ಹಿಂಬಾಲಿಸುತ್ತಾ ಬಂದ ಮಗು ನೋಡ ನೋಡುತ್ತಲೇ ಆಯತಪ್ಪಿ ಬಿಸಿ ಹಾಲಿನ ಪಾತ್ರೆಗೆ ಬಿದ್ದಿದೆ.
ಈ ವೇಳೆ ಹಾಲಿನ ಬಿಸಿಗೆ ಮಗುವಿನ ದೇಹದಾದ್ಯಂತ ತೀವ್ರ ಸುಟ್ಟಗಾಯಗಳಾಗಿವೆ. ಮಗು ಅಕ್ಷಿತಾಳ ಕಿರುಚಾಟ ಕೇಳಿದ ಆಕೆಯ ತಾಯಿ ಕೃಷ್ಣವೇಣಿ ಅಲ್ಲಿಗೆ ದೌಡಾಯಿಸಿ ಮಗುವನ್ನು ಹಾಲಿನ ಪಾತ್ರೆಯಿಂದ ಹೊರತೆಗೆದಿದ್ದಾರೆ. ಅಲ್ಲದೆ ತೀವ್ರಗಾಯಗಳಿಂದ ಕೂಡಿದ್ದ ಮಗುವನ್ನು ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ವೈದ್ಯರ ಶಿಫಾರಸಿನ ಮೇರೆಗೆ, ಅಕ್ಷಿತಾಳನ್ನು ಉತ್ತಮ ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಮಗು ಸಾವನ್ನಪ್ಪಿದೆ.
Advertisement