Karur Stampede: ಸಾವಿನ ಸಂಖ್ಯೆ 39ಕ್ಕೇರಿಕೆ, TVK ಮುಖ್ಯಸ್ಥ ನಟ Vijay ಬಂಧನಕ್ಕೆ ಆಗ್ರಹ, FIR ದಾಖಲು

ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ಭಾರಿ ದುರಂತ ಸಂಭವಿಸಿದ್ದು, ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದಂತೆ 39 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. 46 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Karur Stampede
ಕರೂರ್ ಕಾಲ್ತುಳಿತ
Updated on

ಚೆನ್ನೈ: ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ (Actor Vijay) ಅವರ ಕರೂರ್ ರ್ಯಾಲಿ (Karur Stampede) ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ಹೌದು.. ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ಭಾರಿ ದುರಂತ ಸಂಭವಿಸಿದ್ದು, ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದಂತೆ 39 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. 46 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

38 ಜನರ ಶವಗಳನ್ನು ಗುರುತಿಸಲಾಗಿದೆ. ಈ ಪೈಕಿ 14 ಜನರನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಅವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ದಿಂಡಿಗಲ್ ಜಿಲ್ಲಾಧಿಕಾರಿ ಎಸ್. ಸರವಣನ್ ಕರೂರಿನಲ್ಲಿ ತಿಳಿಸಿದ್ದಾರೆ.

ರ್ಯಾಲಿಗೆ ಕನಿಷ್ಠ 30 ಸಾವಿರ ಜನರು ಸೇರಿದ್ದರು. ಅಲ್ಲದೆ ಅತೀವ ಬಿಸಿಲು ಮತ್ತು ಶೆಖೆಯಿಂದಾಗಿ ದಣಿದಿದ್ದ ಜನರ ಪೈಕಿ ಹಲವರು ಮೂರ್ಛೆ ಹೋಗಿದ್ದರು. ಇದೇ ಸಂದರ್ಭದಲ್ಲಿ ನಟ ವಿಜಯ್ ವೇದಿಕೆ ಮೇಲೆ ಆಗಮಿಸಿದಾಗ ಅವರನ್ನು ನೋಡಲು ಅಭಿಮಾನಿಗಳು ಏಕಾಏಕಿ ನುಗ್ಗಿದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಜನಸಂದಣಿ ಹೆಚ್ಚಾದಾಗ ಮತ್ತು ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಜನರು ಉಸಿರುಗಟ್ಟಿ ಬೀಳಲು ಆರಂಭವಾದಾಗ , ನಟ ವಿಜಯ್ ತಮ್ಮ ಭಾಷಣವನ್ನು ನಿಲ್ಲಿಸಿ ಸಹಾಯಕ್ಕಾಗಿ ಜನಸಮೂಹದ ಮೇಲೆ ನೀರಿನ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು ಎಂದು ಸಾಮಾಜಿಕ ಜಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳಲ್ಲಿ ದಾಖಲಾಗಿದೆ.

Karur Stampede
ಕರೂರ್ ಕಾಲ್ತುಳಿತ ಘಟನೆ ತನಿಖೆಗೆ ಆಯೋಗ; ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ: ಸಿಎಂ ಸ್ಟಾಲಿನ್ ಘೋಷಣೆ

ಕರೂರಿನಲ್ಲಿ ಲಕ್ಷಾಂತರ ಜನರು ಬೆಳಿಗ್ಗೆಯಿಂದಲೇ ಕುಡಿಯುವ ನೀರು ಅಥವಾ ಆಹಾರವಿಲ್ಲದೆ ವಿಜಯ್ ಅವರನ್ನು ನೋಡಲು ಕಾಯುತ್ತಿದ್ದರು. ಗಾಳಿ ವ್ಯವಸ್ಥೆ ಇಲ್ಲದ ಕಾರಣ ಜನರು ಸುಸ್ತಾಗಿದ್ದರು. ಸಾವಿರಾರು ಜನರು ಸೇರಿದ್ದರಿಂದ ಅವರಿಗೆ ಅಲ್ಲಿಂದ ಹೊರಹೋಗಲು ಕೂಡ ಸಾಧ್ಯವಾಗಲಿಲ್ಲ. ವಿಜಯ್ ತಮ್ಮ ಭಾಷಣ ಮುಗಿಸಿದ ನಂತರ, ಜನರು ಹೊರಹೋಗಲು ಪ್ರಯತ್ನಿಸಿದಾಗ ಕಾಲ್ತುಳಿತ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಇನ್ನು ದುರಂತದ ಕುರಿತು ಮಾತನಾಡಿದ ತಮಿಳುನಾಡು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಸ್. ಡೇವಿಡ್ಸನ್ ದೇವಶಿರ್ವತಮ್ ಅವರು, 'ನಾವು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಬೇಕಾಗಿದೆ. ದುರಂತದಲ್ಲಿ ಮೂವತ್ತೊಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

FIR ದಾಖಲು

ಏತನ್ಮಧ್ಯೆ, ಕರೂರು ಪಟ್ಟಣ ಪೊಲೀಸರು ಟಿವಿಕೆ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಳಗನ್ ಸೇರಿದಂತೆ ಹಲವರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109,110,125ಬಿ, 223 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109 ಮತ್ತು 110 ಕ್ರಮವಾಗಿ ಕೊಲೆ ಯತ್ನ ಮತ್ತು ಅಪರಾಧಿಕ ನರಹತ್ಯೆಗೆ ಯತ್ನಿಸುವ ಪ್ರಕರಣಗಳಾಗಿವೆ. ಸೆಕ್ಷನ್ 125 ದುಡುಕಿನ ಅಥವಾ ನಿರ್ಲಕ್ಷ್ಯದ ವರ್ತನೆಯ ಮೂಲಕ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಉಲ್ಲೇಖಿಸುತ್ತದೆ. ಸೆಕ್ಷನ್ 223 ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶವನ್ನು ಪಾಲಿಸದಿದ್ದಕ್ಕೆ ಸಂಬಂಧಿಸಿದ್ದಾಗಿದೆ.

ನಟ ವಿಜಯ್ ಬಂಧನಕ್ಕೆ ಆಗ್ರಹ

ಇದೇ ವೇಳೆ ಕಾಲ್ತುಳಿತಕ್ಕೆ ನಟ ವಿಜಯ್ ಅವರೇ ಕಾರಣ ಎಂದು ಆರೋಪಿಸಿರುವ ಡಿಎಂಕೆ ನಾಯಕರು ಕೂಡಲೇ ವಿಜಯ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

"ಟಿವಿಕೆ ಕಾರ್ಯಕ್ರಮದ ಆಯೋಜಕರು ಕೇವಲ 10000 ಜನರು ರ್ಯಾಲಿಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು, ಆದರೆ 50,000 ರಿಂದ 1 ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು ಮತ್ತು ತಮಿಳುನಾಡು ಪೊಲೀಸರು ವಿಧಿಸಿದ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಜೀವಗಳಿಗೆ ಅಪಾಯವನ್ನುಂಟುಮಾಡಲಾಗಿದೆ. ಕಳೆದುಹೋದ ಪ್ರತಿಯೊಂದು ಜೀವಕ್ಕೂ ವಿಜಯ್ ಜವಾಬ್ದಾರನಾಗಿರುತ್ತಾನೆ. ಅವರನ್ನು ಕೂಡಲೇ ಬಂಧಿಸಬೇಕು" ಎಂದು ಡಿಎಂಕೆ ವಕ್ತಾರ ಐಟಿ ವಿಭಾಗದ ಕಾರ್ಯದರ್ಶಿ ಸೇಲಂ ಧರಣಿಧರನ್ ಟ್ವಿಟರ್‌ನಲ್ಲಿ ವೀಡಿಯೊದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com