

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದ ಬಿಕ್ಕಟ್ಟಿನ ನಡುವೆಯೇ ದೇಶದ ಸ್ಥಿತಿಗತಿಗಳನ್ನು ಸಮತೋಲನದಲ್ಲಿಡಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಮಹತ್ವದ ಸಭೆ ನಡೆಸಿದ್ದಾರೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಬಳಿಕ ಪ್ರಧಾನಿ ಮೋದಿಯವರು ಸಚಿವರೊಂದಿಗೆ ಬುಧವಾರ ಸಭೆ ನಡೆಸಿದ್ದು, ಜನಸಾಮಾನ್ಯರಿಗೆ ಯಾವುದೇ ರೀತಿಯ ಹೊರೆ ಅಥವಾ ತೊಂದರೆ ಆಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಸಚಿವಾಲಯಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ತೈಲ ಹಾಗೂ ಅನಿಲ ಸರಬರಾಜಿನ ಅನಿಶ್ಚಿತತೆ, ಸಾಗಣೆ ವ್ಯತ್ಯಯಗಳು ಹಾಗೂ ಬೆಲೆ ಏರಿಳಿತದ ಪರಿಣಾಮಗಳು ಭಾರತದಲ್ಲಿ ಹೇಗೆ ಪ್ರತಿಫಲಿಸಬಹುದು ಎಂಬುದರ ಕುರಿತು ಸಮಗ್ರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ,
ಸಭೆಯಲ್ಲಿ ದೇಶದಲ್ಲಿ ಇಂಧನ ಭದ್ರತೆ ಕಾಪಾಡುವುದು ಅತ್ಯಂತ ಪ್ರಮುಖ ಎಂದು ಒತ್ತಿ ಹೇಳಿರುವ ಪ್ರಧಾನಮಂತ್ರಿಗಳು, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆ ನಿರಂತರವಾಗಿರಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ,
ಸಂಪುಟ ಕಾರ್ಯದರ್ಶಿ ಸೋಮನಾಥನ್ ಸಭೆಯಲ್ಲಿ ಮಾತನಾಡಿ, ವಿವಿಧ ದೇಶಗಳಿಂದ ಪರ್ಯಾಯ ಆಮದು ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಎಲ್‌ಪಿಜಿ, ಎಲ್‌ಎನ್‌ಜಿ ಹಾಗೂ ವಿದ್ಯುತ್ ಲಭ್ಯತೆಯನ್ನು ಸ್ಥಿರವಾಗಿಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಜೊತೆಗೆ ಪೈಪ್‌ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ನಗರ ಪ್ರದೇಶಗಳಲ್ಲಿ ವಿಸ್ತರಿಸುವ ಯೋಜನೆಗಳಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಬಳಿಕ ಕೃಷಿ ಕ್ಷೇತ್ರಕ್ಕೂ ವಿಶೇಷ ಮಹತ್ವ ನೀಡಲಾಗಿದ್ದು, ಮುಂಗಾರು ಹಂಗಾಮಿನ ಮೊದಲು ರಸಗೊಬ್ಬರ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದರು.
ಜಾಗತಿಕ ಸಂಘರ್ಷದಿಂದ ಸರಬರಾಜು ಸರಪಳಿಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳು ರೈತರಿಗೆ ತೊಂದರೆ ತರಬಾರದು ಎಂಬುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ.
ಇದಲ್ಲದೆ, ವಿಮಾನಯಾನ, ಕೈಗಾರಿಕೆ, ವಾಣಿಜ್ಯ ಹಾಗೂ ಸಾರಿಗೆ ಕ್ಷೇತ್ರಗಳ ಮೇಲೂ ಸಭೆಯಲ್ಲಿ ವಿಶೇಷ ಗಮನ ಹರಿಸಲಾಗಿದೆ.
ಸರಕು ಸಾಗಣೆ, ಆಮದು-ರಫ್ತು ಚಟುವಟಿಕೆಗಳು ವ್ಯತ್ಯಯಗೊಳ್ಳದಂತೆ ಮತ್ತು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿ ಇರಲು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಗೆ ಮೋದಿಯವರು ಸೂಚನೆ ನೀಡಿದ್ದಾರೆ.
ಸಾಮಾನ್ಯ ಜನರ ಜೀವನೋಪಾಯದ ಮೇಲೆ ಯಾವುದೇ ನೇರ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳುವುದು ಸರ್ಕಾರದ ಮೊದಲ ಆದ್ಯತೆ ಎಂದು ಪ್ರಧಾನಿ ಮೋದಿಯವರು ಪುನರುಚ್ಚರಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಪಪ್ರಚಾರ ತಡೆಗೆ ಕ್ರಮ
ಇದೇ ವೇಳೆ ದೇಶದಲ್ಲಿ ಗೊಂದಲ ಅಥವಾ ಅಪಪ್ರಚಾರ ಹರಡುವುದನ್ನು ತಡೆಯಲು ನಿಖರ ಮತ್ತು ಸಮಯೋಚಿತ ಮಾಹಿತಿಯ ಹರಿವು ಅತ್ಯಂತ ಮುಖ್ಯ ಎಂದು ಪ್ರಧಾನಿ ಮೋದಿ ಅವರು ಒತ್ತಿ ಹೇಳಿದ್ದಾರೆ.
ಪರಿಸ್ಥಿತಿ ಬದಲಾಗುತ್ತಿರುವ ಸಂದರ್ಭದಲ್ಲಿ “ಸತ್ಯವಾದ ಮಾಹಿತಿ ಸರಿಯಾದ ಸಮಯಕ್ಕೆ ಜನರಿಗೆ ತಲುಪಬೇಕು” ಎಂದು ಅವರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಸಂಕಷ್ಟದ ಸಮಯದಲ್ಲಿ ಅಪಪ್ರಚಾರ ಮತ್ತು ವದಂತಿಗಳು ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ, ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಧಿಕೃತ ಮಾಹಿತಿಯನ್ನು ಸುಗಮವಾಗಿ ಜನರಿಗೆ ತಲುಪಿಸುವಂತೆ ಪ್ರಧಾನಿ ಸೂಚಿಸಿದ್ದಾರೆ.
ಇದೇ ವೇಳೆ, ಜನರಿಗೆ ಅಗತ್ಯವಾದ ವಸ್ತುಗಳ ಲಭ್ಯತೆ ಕುರಿತು ಮೋದಿ ಸಮಗ್ರ ಪರಿಶೀಲನೆ ನಡೆಸಿದರು. ದಿನನಿತ್ಯ ಬಳಕೆಯ ಸರಕುಗಳು, ಇಂಧನ ಮತ್ತು ಆಹಾರ ಪದಾರ್ಥಗಳ ಪೂರೈಕೆ ವ್ಯತ್ಯಯಗೊಳ್ಳದಂತೆ ಎಲ್ಲಾ ಸಚಿವಾಲಯಗಳು ಮುಂಚಿತವಾಗಿ (proactive) ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಜಾಗತಿಕ ಮಟ್ಟದಲ್ಲಿ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಪರ್ಯಾಯ ದೇಶಗಳೊಂದಿಗೆ ವ್ಯಾಪಾರ ಸಂಬಂಧ ಬಲಪಡಿಸುವುದು, ಆಮದು ಮೂಲಗಳನ್ನು ವೈವಿಧ್ಯಗೊಳಿಸುವುದು ಹಾಗೂ ಸಮುದ್ರ ಮಾರ್ಗಗಳ ಸುರಕ್ಷತೆ ಕಾಪಾಡಲು ರಾಜತಾಂತ್ರಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ವಿಷಯಗಳನ್ನೂ ಸಭೆಯಲ್ಲಿ ಚರ್ಚಿಸಲಾಯಿತು.
ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಭಾಗವಹಿಸಿದ್ದರು. ಜೊತೆಗೆ ಶಿವರಾಜ್ ಸಿಂಗ್ ಚೌಹಾಣ್, ಜೆ ಪಿ ನಡ್ಡಾ, ಅಶ್ವಿನಿ ವೈಷ್ಣವ್, ಮನೋಹರ್ ಲಾಲ್ ಖಟ್ಟರ್, ರಾಮ್ ಮೋಹನ್ ನಾಯ್ಡು ಹಾಗೂ ಹರ್ದೀಪ್ ಸಿಂಗ್ ಪುರಿ ಕೂಡ ಹಾಜರಿದ್ದರು.
ಹಿರಿಯ ಅಧಿಕಾರಿಗಳಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನ ಕಾರ್ಯದರ್ಶಿಗಳು ಪಿ ಕೆ ಮಿಶ್ರಾ ಮತ್ತು ಶಕ್ತಿಕಾಂತ ದಾಸ್, ಜೊತೆಗೆ ಸಂಪುಟ ಕಾರ್ಯದರ್ಶಿ ಟಿ ವಿ ಸೋಮನಾಥನ್ ಸಭೆಯಲ್ಲಿ ಭಾಗವಹಿಸಿದ್ದರು.
Advertisement