

ನವದೆಹಲಿ/ಅಹಮದಾಬಾದ್: ಗುಜರಾತ್‌ನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, “ನೀವು ಸಂವಿಧಾನವನ್ನು ಉಲ್ಲಂಘಿಸುತ್ತಿದ್ದೀರಿ, ಮುಸ್ಲಿಮರ ಮೇಲೆ ಹಿಂದೂ ಕಾಯ್ದೆಯನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕಾನೂನು ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳಿಗೆ ಧಕ್ಕೆ ತರುತ್ತದೆ. ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಧರ್ಮಾಧಾರಿತ ಕಾನೂನುಗಳು ನಡೆದು ಬರುತ್ತಿವೆ. ವಿಭಿನ್ನ ಧರ್ಮಗಳಿಗೆ ತಮ್ಮದೇ ಆದ ವೈಯಕ್ತಿಕ ಕಾನೂನುಗಳಿರುವ ಭಾರತದಲ್ಲಿ, ಒಂದೇ ರೀತಿಯ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ವಾದಿಸಿದ್ದಾರೆ.
ಯುಸಿಸಿ ಹೆಸರಿನಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಂಶಗಳನ್ನು ಇತರ ಧರ್ಮಗಳ ಮೇಲೂ ಹೇರಲಾಗುತ್ತಿದೆ. ಇದು ಧಾರ್ಮಿಕ ವೈವಿಧ್ಯತೆಯನ್ನು ಹಾಳುಮಾಡುವ ಪ್ರಯತ್ನವಾಗಿದ್ದು, ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ಸರ್ಕಾರ ಯುಸಿಸಿ ಜಾರಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ, ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ.
ಒಂದು ಕಡೆ ಸರ್ಕಾರ ಸಮಾನ ಹಕ್ಕು ಮತ್ತು ಸಮಾನ ಕಾನೂನು ಎಂದು ಹೇಳಿ ಕಾಯ್ತೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ಮತ್ತು ಕೆಲ ಸಾಮಾಜಿಕ ಸಂಘಟನೆಗಳು ಇದು ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸುತ್ತಿವೆ.
ಈ ವಿಷಯದ ಕುರಿತು ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡದಿದ್ದರೂ, ಯುಸಿಸಿ ಕುರಿತ ಚರ್ಚೆ ದೇಶದಾದ್ಯಂತ ತೀವ್ರಗೊಳ್ಳುತ್ತಿದೆ.
Advertisement