

ಅಮರಾವತಿ: 2 ಪ್ರತ್ಯೇಕ ತೆಲುಗು ರಾಜ್ಯಗಳಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದ ದಶಕಗಳ ಬಳಿಕ ಕೊನೆಗೂ ಆಂಧ್ರಕ್ಕೆ ರಾಜಧಾನಿ ಘೋಷಣೆಯಾಗಿದ್ದು ಅಮರಾವತಿಯನ್ನು ನೂತನ ರಾಜಧಾನಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.
ಹೌದು.. ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಆ ಮೂಲಕ, ಹನ್ನೆರಡು ವರ್ಷಗಳ ಕಾಲ ಇದ್ದ ಅನಿಶ್ಚಿತತೆಗೆ ಕೊನೆಗೂ ತೆರೆಬಿದ್ದಿದೆ. ಸ್ವತಃ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಅಲ್ಲದೆ ರಾಜಧಾನಿಗೆ ಅಂಕಿತ ಹಾಕಿದ್ದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಹಲವಾರು ಕಾರಣಗಳಿಂದ ರಾಜಧಾನಿ ಘೋಷಣೆ ಮುಂದಕ್ಕೆ ಹೋಗುತ್ತಲೇ ಇತ್ತು. ಅಖಂಡ ಆಂಧ್ರ ವಿಭಜನೆ ಆದಾಗಿನಿಂದಲೂ, ಆಂಧ್ರದ ರಾಜಧಾನಿಯ ಬಗ್ಗೆ ಹಲವು ಗೊಂದಲಗಳಿದ್ದವು. ವೈಎಸ್ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೂರು ರಾಜಧಾನಿ ಎನ್ನುವ ವಿಷಯ ಪ್ರಸ್ತಾವನೆಯಿತ್ತು. ಆದರೆ, ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಇದೀಗ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಅವರ ವಿಶೇಷ ಪರಿಶ್ರಮದಿಂದ ಇದು ಈಗ ಸಾಕಾರಗೊಂಡಿದೆ.
ಗೆಜೆಟ್ ಅಧಿಸೂಚನೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026 ರ ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ಅನುಮೋದಿಸಿದ ನಂತರ, ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿ, ಆಂಧ್ರಪ್ರದೇಶದ ಅಧಿಕೃತ ರಾಜಧಾನಿಯಾಗಿ ಘೋಷಿಸಲಾಗಿದೆ. ಇದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 111 ನೇ ವಿಧಿಯ ಅಡಿಯಲ್ಲಿ, ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ ಸೆಕ್ಷನ್ 5(2) ಅನ್ನು ತಿದ್ದುಪಡಿ ಮಾಡಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆಯು ಮಾರ್ಚ್ 28 ರಂದು ನಿರ್ಣಯವನ್ನು ಅಂಗೀಕರಿಸಿತು ಮತ್ತು ಏಪ್ರಿಲ್ 1, 2 ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 260 ನಿಮಿಷಗಳ ಚರ್ಚೆಯ ನಂತರ ಸಂಸತ್ತು ಮಸೂದೆಯನ್ನು ತಿದ್ದುಪಡಿ ಮಾಡಿತು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು ಮತ್ತು ರಾಜಧಾನಿ ಸ್ಥಾನಮಾನವು ಜೂನ್ 2, 2024 ರಿಂದಲೇ ಜಾರಿಗೆ ಬರುತ್ತದೆ.
ಸಿಎಂ ನಾಯ್ಡು ಪೋಸ್ಟ್
ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿನ ಪೋಸ್ಟ್‌ನಲ್ಲಿ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂದು ಘೋಷಿಸಿದರು. "ಆಂಧ್ರಪ್ರದೇಶದ ನನ್ನ ಜನರ ಪರವಾಗಿ, ನಮ್ಮ ರಾಜಧಾನಿಯ ಬಹುಕಾಲದ ಕನಸನ್ನು ಈಡೇರಿಸುವ ಮೂಲಕ 2026 ರ ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಕಾಯ್ದೆಗೆ ಅವರ ದಯೆಯಿಂದ ಒಪ್ಪಿಗೆ ನೀಡಿದ್ದಕ್ಕಾಗಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಂಧ್ರ ಪ್ರದೇಶಕ್ಕೆ ನೀಡಿದ ಬದ್ಧತೆ ಮತ್ತು ಮಸೂದೆಯನ್ನು ಬೆಂಬಲಿಸಿದ ಎಲ್ಲಾ ಸಂಸದರಿಗೆ ಅವರು ಧನ್ಯವಾದ ಅರ್ಪಿಸಿದರು. "ಇದು ಆಂಧ್ರಪ್ರದೇಶದ ನನ್ನ ಜನರಿಗೆ, ವಿಶೇಷವಾಗಿ ಅಮರಾವತಿಯ ನನ್ನ ರೈತರಿಗೆ ಸಿಕ್ಕ ಜಯ" ಎಂದು ಅವರು ಹೇಳಿದರು.
ರಾಜಧಾನಿ ಇತಿಹಾಸ
2014ರಲ್ಲಿ ಅಖಂಡ ಆಂಧ್ರ ಪ್ರದೇಶ ವಿಭಜನೆಯಾಗಿ ತೆಲಂಗಾಣ ಹುಟ್ಟಿಕೊಂಡಿತ್ತು. ಅಂದಿನಿಂದ, ಹತ್ತು ವರ್ಷಗಳ ಕಾಲ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಹೈದರಾಬಾದ್ ರಾಜಧಾನಿ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಆದರೆ, ಈ ಅವಧಿ ಮುಗಿದು ಎರಡು ವರ್ಷವಾದ ನಂತರ ಈಗ, ಅಮರಾವತಿಯನ್ನು ರಾಜಧಾನಿ ಎಂದು ಘೋಷಿಸಲಾಗಿದೆ.
12 ವರ್ಷ ರಾಜಧಾನಿ ಘೋಷಣೆಯಾಗಿರಲಿಲ್ಲ
ದಕ್ಷಿಣ ಭಾರತದ ಇತರ ರಾಜ್ಯಗಳಾದ ತಮಿಳುನಾಡಿಗೆ ಚನ್ನೈ, ಕರ್ನಾಟಕಕ್ಕೆ ಬೆಂಗಳೂರು ಮತ್ತು ಕೇರಳಕ್ಕೆ ತಿರುವನಂತಪುರಂನಂತೆ, ರಾಜ್ಯ ಇಬ್ಬಾಗವಾದಾಗ, ಮುಂದಿನ ರಾಜಧಾನಿಯಾಗಿ ಯಾವ ನಗರವನ್ನಾಗಿ ಘೋಷಣೆ ಮಾಡುವುದು ಎನ್ನುವ ಗೊಂದಲವಿತ್ತು. ಹಾಗಾಗಿ, ಹೈದರಾಬಾದ್’ಅನ್ನು ಜಂಟಿ ರಾಜಧಾನಿಯಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಹನ್ನೆರಡು ವರ್ಷಗಳ ಸುದೀರ್ಘ ಪ್ರಕ್ರಿಯೆಗೆ ಹಲವು ರಾಜಕೀಯ ಮತ್ತು ಇತರ ಕಾರಣಗಳಿವೆ.
ಮೂರು ರಾಜಧಾನಿ ಗೊಂದಲ
ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ಅವರು ರಾಜ್ಯಕ್ಕೆ ಮೂರು ರಾಜಧಾನಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದದ್ದು. ಶಾಸಕಾಂಗ ವ್ಯವಸ್ಥೆಗೆ ಅಮರಾವತಿ, ನ್ಯಾಯಾಂಗ ವ್ಯವಸ್ಥೆಗೆ ಕರ್ನೂಲ್ ಮತ್ತು ಆಡಳಿತಾತ್ಮಕವಾಗಿ ವಿಶಾಖಪಟ್ಟಣಂ ನಗರವನ್ನು ರಾಜಧಾನಿಯಾಗಿ ಮಾಡಲು ಹೊರಟಿದ್ದರು. 2019ರಲ್ಲಿ ಅಧಿಕಾರಕ್ಕೆ ಬಂದಿದ್ದ ಜಗನ್ ಅವರ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿತ್ತು. ಇದು, ಅಭಿವೃದ್ದಿಯ ಹಾದಿಗೆ ದೊಡ್ಡ ತೊಡಕಾಗಿತ್ತು.
ಒಂದೇ ರಾಜಧಾನಿ, ಕಾಯಿದೆ ತಿದ್ದುಪಡಿ
2024ರಲ್ಲಿ ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಚಂದ್ರಬಾಬು ನಾಯ್ಡು, ಅಮರಾವತಿ ಒಂದೇ ರಾಜಧಾನಿ ಎಂದು ಘೋಷಣೆಯನ್ನು ಮಾಡಿ, ಅದಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೆತ್ತಿಕೊಂಡರು. ಜೊತೆಗೆ, ಭವಿಷ್ಯದಲ್ಲಿ ಬೇರೆ ಸರ್ಕಾರ ಅಧಿಕಾರಕ್ಕೆ ಬಂದರೆ, ಮತ್ತೆ ರಾಜಧಾನಿಯನ್ನು ಬದಲಿಸದಂತೆ ತಡೆಯಲು ಸಂಸತ್ತಿನಲ್ಲಿ ಕಾಯಿದೆಯನ್ನು ತಿದ್ದುಪಡಿ ಮಾಡಲಾಯಿತು.
Advertisement