

ವಿಶಾಖಪಟ್ಟಣಂ: ಇಲ್ಲಿನ ಖಾಸಗಿ ಜಮೀನೊಂದರ ಬಳಿ ಎರಡು ಸ್ಥಳೀಯ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಒಂದು ರನ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬ ಕೊಲೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ನಡೆದ ಪಂದ್ಯದ ಸಮಯದಲ್ಲಿ ಒಂದು ರನ್‌ಗೆ ಸಂಬಂಧಿಸಿದಂತೆ ಆಟಗಾರರ ನಡುವೆ ವಾಗ್ವಾದ ನಡೆದಿದೆ. ಆದರೆ, ಪಂದ್ಯದ ಅಂಪೈರ್ ಚಿರಂಜೀವಿ ಮಧ್ಯಪ್ರವೇಶಿಸಿದಾಗ ಅದು ಆರಂಭದಲ್ಲಿ ಇತ್ಯರ್ಥವಾಯಿತು.
ಆದರೆ ಸಂಜೆ, ಆರೋಪಿ ಕೆ. ಕಿಶೋರ್ (26) ಅಂಪೈರ್ ಸಹೋದರ ಅಜಿತ್ (23) ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ವಾಗ್ವಾದ ನಡೆದ ನಂತರ ಅವರ ಎದೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಅಧಿಕಾರಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಅಜಿತ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾದಿತ ರನ್ ಬಗ್ಗೆ ಖಾಸಗಿ ಛಾಯಾಗ್ರಾಹಕರಾಗಿರುವ ಆರೋಪಿ ಕಿಶೋರ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಆದರೆ, ಆ ದಿನದ ನಂತರ ಎರಡೂ ಕಡೆಯವರು ಮತ್ತೆ ಮುಖಾಮುಖಿಯಾದಾಗ, ವಾಗ್ವಾದ ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆಗೆ ಕಾರಣವಾಯಿತು ಎಂದು ಅಧಿಕಾರಿ ಹೇಳಿದರು.
ಈಮಧ್ಯೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement