ಕಾಂಗ್ರೆಸ್ ಅವಧಿಯಲ್ಲಿ ಆಂಧ್ರ ವಿಭಜನೆ ಭಾರತ-ಪಾಕ್ ವಿಭಜನೆಗಿಂತ ಕೆಟ್ಟದಾಗಿತ್ತು- ತೇಜಸ್ವಿ ಸೂರ್ಯ ವಾಗ್ದಾಳಿ; ತೆಲಂಗಾಣ ರಾಜಕಾರಣಿಗಳಿಂದ ಟೀಕೆ

2014 ರಲ್ಲಿ ಕಾಂಗ್ರೆಸ್ ಪಕ್ಷ ಆಂಧ್ರ- ತೆಲಂಗಾಣ ವಿಭಜನೆ ಮಾಡಿದ ರೀತಿ ಹಿಂದೊಮ್ಮೆ ಅದು ಭಾರತ-ಪಾಕಿಸ್ತಾನ ವಿಭಜನೆ ಮಾಡಿದ್ದಕ್ಕಿಂತ ಕೆಟ್ಟ ರೀತಿಯಲ್ಲಿತ್ತು ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.
MP Tejasvi Surya
ಸಂಸದ ತೇಜಸ್ವಿ ಸೂರ್ಯonline desk
Updated on

ನವದೆಹಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ತಮ್ಮ ಸಂಸತ್ ಭಾಷಣದಲ್ಲಿ ಕಾಂಗ್ರೆಸ್ ನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ ಪಕ್ಷ ಒಂದು ರಾಜ್ಯವನ್ನು ವಿಭಜನೆ ಮಾಡಿದ ರೀತಿಯನ್ನು ಟೀಕಿಸಿದ್ದಾರೆ.

2014 ರಲ್ಲಿ ಕಾಂಗ್ರೆಸ್ ಪಕ್ಷ ಆಂಧ್ರ- ತೆಲಂಗಾಣ ವಿಭಜನೆ ಮಾಡಿದ ರೀತಿ ಹಿಂದೊಮ್ಮೆ ಬ್ರಿಟೀಷರು ಭಾರತ-ಪಾಕಿಸ್ತಾನ ವಿಭಜನೆ ಮಾಡಿದ್ದಕ್ಕಿಂತ ಕೆಟ್ಟ ರೀತಿಯಲ್ಲಿತ್ತು ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.

ಆದರೆ ತೆಲಂಗಾಣ ರಾಜಕಾರಣಿಗಳು ತೇಜಸ್ವಿ ಸೂರ್ಯ ಅವರ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಪುಣ್ಯಕ್ಕೆ ಡೀಲಿಮಿಟೇಷನ್ ಪ್ರಕ್ರಿಯೆಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ. ಏಕೆಂದರೆ ಕಾಂಗ್ರೆಸ್ ನವರ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಅಂದರೆ, 2014 ರಲ್ಲಿ ಅವರು ಆಂಧ್ರ-ತೆಲಂಗಾಣ ರಾಜ್ಯಗಳನ್ನು 1947 ರಲ್ಲಿ ಬ್ರಿಟೀಷರು ಭಾರತ- ಪಾಕ್ ವಿಭಜಮೆ ಮಾಡಿದ ರೀತಿಗಿಂತ ಕೆಟ್ಟದಾಗಿ ವಿಭಜನೆ ಮಾಡಿದ್ದರು ಎಂದು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಹೇಳಿಕೆಗೆ ತೆಲಂಗಾಣ ರಾಜಕಾರಣಿಗಳಿಂದ ಆಕ್ಷೇಪ

ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತೇಜಸ್ವಿ ಸೂರ್ಯ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ವಿನಂತಿಸಿದ್ದಾರೆ. ತೆಲಂಗಾಣ ರಚನೆಯನ್ನು ಭಾರತ-ಪಾಕಿಸ್ತಾನ ವಿಭಜನೆಗೆ ಹೋಲಿಸಿರುವುದು ‘ಅಸಂವೇದನಶೀಲ ಮತ್ತು ವಾಸ್ತವಿಕತೆಗೆ ವಿರುದ್ಧ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಆ ಹೇಳಿಕೆಗಳನ್ನು ಅಧಿಕೃತ ದಾಖಲೆಗಳಿಂದ ಅಳಿಸುವುದು, ಸಂಸದರಿಂದ ಕ್ಷಮೆಯಾಚನೆ ಹಾಗೂ ಸಂಸತ್ತಿನ ಗೌರವ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಬೇಡಿಕೆ ಇಟ್ಟಿದ್ದಾರೆ.

MP Tejasvi Surya
Watch | ಲೋಕಸಭಾ ಕ್ಷೇತ್ರ ಮರು ವಿಂಗಡಣೆ: ದಕ್ಷಿಣ ರಾಜ್ಯಗಳಿಗೆ ಇದು ಉತ್ತಮ ಡೀಲ್- ತೇಜಸ್ವಿ ಸೂರ್ಯ

ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ತೆಲಂಗಾಣ ರಾಜ್ಯದ ಪ್ರಜಾಸತ್ತಾತ್ಮಕ ರಚನೆಯನ್ನು ದೇಶ ವಿಭಜನೆಯ ದುರಂತ ಘಟನೆಯೊಂದಿಗೆ ಹೋಲಿಸುವುದು ಸಂಪೂರ್ಣ ಅಜ್ಞಾನ ಮತ್ತು ಅಹಂಕಾರದ ಪ್ರತೀಕ,” ಎಂದು ಅವರು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಕ್ಷಮೆ ಕೇಳಬೇಕೆಂದು ಕೆಟಿಆರ್ ಆಗ್ರಹಿಸಿದ್ದಾರೆ. “ತೆಲಂಗಾಣ ದಾನವಾಗಿ ಸಿಕ್ಕದ್ದಲ್ಲ, ದಶಕಗಳ ಹೋರಾಟ ಮತ್ತು ಸಾವಿರಾರು ಯುವಕರ ತ್ಯಾಗದ ಫಲವಾಗಿ ರೂಪುಗೊಂಡ ರಾಜ್ಯ,” ಎಂದು ಅವರು ಮತ್ತಷ್ಟು ಸ್ಪಷ್ಟಪಡಿಸಿದರು.

ಈ ವಿರೋಧ ಧ್ವನಿಗೆ ಸೇರ್ಪಡೆಯಾಗಿ, ತೆಲಂಗಾಣ ಜಾಗೃತಿ ಅಧ್ಯಕ್ಷೆ ಕೆ. ಕವಿತಾ ಕೂಡ ಎಕ್ಸ್‌ನಲ್ಲಿ ಕಿಡಿಕಾರಿದರು. “ತೇಜಸ್ವಿ ಸೂರ್ಯ, ನಿಮಗೆ ಎಷ್ಟು ಧೈರ್ಯ? ನೀವು ಆರು ದಶಕಗಳ ಕಾಲ ತೆಲಂಗಾಣಕ್ಕಾಗಿ ಹೋರಾಡಿದವರನ್ನಷ್ಟೇ ಅಲ್ಲ, ತಮ್ಮ ಪ್ರಾಣ ತ್ಯಾಗ ಮಾಡಿದ ಸಾವಿರಾರು ಜನರ ಸ್ಮೃತಿಯನ್ನೂ ಅವಮಾನಿಸುತ್ತಿದ್ದೀರಿ,” ಎಂದು ಟೀಕಿಸಿದರು.

ಕವಿತಾ ಅವರು ತೆಲಂಗಾಣದ ಬಿಜೆಪಿ ಸಂಸದರನ್ನು ಗುರಿಯಾಗಿಸಿಕೊಂಡು, “ಮಾತನಾಡಿ ಅಥವಾ ರಾಜೀನಾಮೆ ನೀಡಿ. ನಮ್ಮ ಭಾವನೆಗಳ ಪವಿತ್ರತೆಯನ್ನು ಕಾಪಾಡಲು ನಿಮಗೆ ಧೈರ್ಯವಿಲ್ಲದಿದ್ದರೆ, ತೆಲಂಗಾಣವನ್ನು ಪ್ರತಿನಿಧಿಸುವ ಹಕ್ಕೇ ನಿಮಗೆ ಇಲ್ಲ,” ಎಂದು ಸವಾಲು ಹಾಕಿದ್ದಾರೆ.

ತೆಲಂಗಾಣದ ಸಂಸದರು ಮೌನ ವಹಿಸಿರುವುದನ್ನೂ ಬಿಆರ್ಎಸ್ ತೀವ್ರವಾಗಿ ಖಂಡಿಸಿದೆ. “ಸಂಸತ್ತಿನ ವೇದಿಕೆಯಲ್ಲಿ ಇಂತಹ ಹೇಳಿಕೆಗಳು ಬಂದಾಗಲೂ, ರಾಜ್ಯದ ಆಯ್ಕೆಯಾದ ಪ್ರತಿನಿಧಿಗಳು ಮೌನವಾಗಿರುವುದು ನಾಚಿಕೆಗೇಡಿತನಕ್ಕಿಂತ ಕಡಿಮೆಯಲ್ಲ,” ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com