ಮಹಿಳಾ ಮೀಸಲು ಮಸೂದೆ ಸೋಲು ಕೇಂದ್ರ ಸರ್ಕಾರಕ್ಕೆ 'ಕರಾಳ ದಿನ', ಆದರೆ 'ಪ್ರಜಾಪ್ರಭುತ್ವದ ಗೆಲುವು': ಪ್ರಿಯಾಂಕಾ ಗಾಂಧಿ; Video

ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೋಲು ವಿರೋಧ ಪಕ್ಷಗಳ ಏಕತೆಯ ಶಕ್ತಿಯನ್ನು ತೋರಿಸಿದ್ದು, ಸಂವಿಧಾನದ ತತ್ವಗಳನ್ನು ಕಾಪಾಡಿದೆ ಎಂದು ಹೇಳಿದರು.
Congress General Secretary Priyanka Gandhi Vadra addresses a press conference at AICC in New Delhi
ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ
Updated on

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದಿರುವುದು “ಪ್ರಜಾಪ್ರಭುತ್ವದ ಗೆಲುವು” ಮತ್ತು ಕೇಂದ್ರ ಸರ್ಕಾರಕ್ಕೆ “ಕಪ್ಪು ದಿನ” ಎಂದು ಕಾಂಗ್ರೆಸ್ ನಾಯಕಿ ಸಂಸದೆ ಪ್ರಿಯಾಂಕಾ ಗಾಂಧಿ ವ್ಯಾಖ್ಯಾನಿಸಿದ್ದಾರೆ. ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಫೆಡರಲ್ ವ್ಯವಸ್ಥೆಯನ್ನು ಬದಲಾಯಿಸಲು ಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೋಲು ವಿರೋಧ ಪಕ್ಷಗಳ ಏಕತೆಯ ಶಕ್ತಿಯನ್ನು ತೋರಿಸಿದ್ದು, ಸಂವಿಧಾನದ ತತ್ವಗಳನ್ನು ಕಾಪಾಡಿದೆ ಎಂದು ಹೇಳಿದರು. “ನಿನ್ನೆ ನಡೆದದ್ದು ಪ್ರಜಾಪ್ರಭುತ್ವಕ್ಕೆ ದೊಡ್ಡ ಗೆಲುವು. ಸಂಯುಕ್ತ ವ್ಯವಸ್ಥೆಯನ್ನು ಬದಲಾಯಿಸುವ ಸಂಚು ವಿಫಲವಾಗಿದೆ. ಇದು ಸಂವಿಧಾನಕ್ಕೆ, ವಿರೋಧ ಪಕ್ಷಗಳ ಏಕತೆಗೆ ಮತ್ತು ದೇಶಕ್ಕೆ ಸಂದ ಜಯ ಎಂದು ಅವರು ಹೇಳಿದರು.

Congress General Secretary Priyanka Gandhi Vadra addresses a press conference at AICC in New Delhi
'ವಿರೋಧ ಪಕ್ಷಗಳು ತಪ್ಪು ಮಾಡಿವೆ: ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ': ಮಹಿಳಾ ಮೀಸಲಾತಿ ಮಸೂದೆ ಸೋಲಿನ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ!

ಕ್ಷೇತ್ರ ಪುನರ್ ವಿಂಗಡಣೆ ಸಂಬಂಧಿಸಿದ ವಿಶಾಲ ರಾಜಕೀಯ ಉದ್ದೇಶಕ್ಕಾಗಿ ಸರ್ಕಾರ ಮಹಿಳಾ ಮೀಸಲಾತಿ ವಿಷಯವನ್ನು ಬಳಸಿಕೊಂಡಿದೆ ಎಂದು ಅವರು ಆರೋಪಿಸಿದರು. ಕೇಂದ್ರ ಎನ್ ಡಿಎ ಸರ್ಕಾರದ ಪೂರ್ಣ ಸಂಚು ಅಧಿಕಾರದಲ್ಲೇ ಉಳಿಯುವುದಕ್ಕಾಗಿ. ಈಗ ಕ್ಷೇತ್ರ ಮರುವಿಂಗಡಣೆ ಮಾಡದಿದ್ದರೆ 2029ರೊಳಗೆ ಆಗುವುದಿಲ್ಲ ಎಂದು ಅವರು ನಂಬಿದ್ದರು, ಈ ಪ್ರಕ್ರಿಯೆಯನ್ನು “ತಮ್ಮ ಇಚ್ಛೆಯಂತೆ ನಡೆಸಲು ಯತ್ನಿಸಿದರು ಎಂದು ಹೇಳಿದರು.

ಫಲಿತಾಂಶ ಏನೇ ಆಗಲಿ ರಾಜಕೀಯ ಲಾಭ ಪಡೆಯಲು ಸರ್ಕಾರ ಪ್ರಯತ್ನಿಸಿತು. ಮಸೂದೆ ಅಂಗೀಕಾರವಾದರೆ ಗೆಲುವು, ವಿಫಲವಾದರೆ ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿಗಳೆಂದು ತೋರಿಸಿ ತಾವು ಮಹಿಳಾ ಪರ ಹೋರಾಟಗಾರರೆಂದು ತೋರಿಸಿಕೊಳ್ಳಲು ಯತ್ನಿಸಿದರು ಎಂದು ಹೇಳಿದ ಪ್ರಿಯಾಂಕಾ ಗಾಂಧಿ ಮಹಿಳೆಯರ ರಕ್ಷಕನಾಗುವುದು ಸುಲಭವಲ್ಲ ಎಂದರು.

Congress General Secretary Priyanka Gandhi Vadra addresses a press conference at AICC in New Delhi
ಸತ್ಯಮೇವ ಜಯತೇ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದಕ್ಕೆ BJD ಸಂಭ್ರಮಾಚರಣೆ!

ಹಿಂದಿನ ಘಟನೆಗಳನ್ನು ಉಲ್ಲೇಖಿಸಿ, ಮಹಿಳಾ ವಿಚಾರಗಳಲ್ಲಿ ಬಿಜೆಪಿಯ ದಾಖಲೆ ಬಗ್ಗೆ ಪ್ರಶ್ನೆ ಎತ್ತಿದರು. ಹತ್ರಾಸ್‌ನಲ್ಲಿ ಏನಾಯಿತು, ನಮ್ಮ ಒಲಿಂಪಿಕ್ ಪದಕ ವಿಜೇತರಿಗೆ ಏನಾಯಿತು, ಇವುಗಳನ್ನೆಲ್ಲ ನಾವು ನೋಡಿದ್ದೇವೆ, ಬಿಜೆಪಿಯವರ ಮಹಿಳೆಯರ ಬಗ್ಗೆ ಕಾಳಜಿ ಏನೆಂದು ಅರ್ಥವಾಗಿದೆ ಎಂದರು.

ಮಹಿಳಾ ಮೀಸಲಾತಿಗೆ ವಿರೋಧವಿಲ್ಲ

ವಿರೋಧ ಪಕ್ಷದ ನಿಲುವನ್ನು ಪುನರುಚ್ಚರಿಸಿದ ಪ್ರಿಯಾಂಕಾ ಗಾಂಧಿ, ಮಹಿಳಾ ಮೀಸಲಾತಿಗೆ ವಿರೋಧವಿಲ್ಲ, ಆದರೆ ಅದನ್ನು ಕ್ಷೇತ್ರ ಪುನರ್ ವಿಂಗಡಣೆಗೆ ಕೊಂಡಿ ಹಾಕುವುದಕ್ಕೆ ವಿರೋಧವಿದೆ ಎಂದು ಹೇಳಿದರು. 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯ ಈಗಿನ ಸ್ಥಾನಮಾನದಲ್ಲೇ ಜಾರಿಗೆ ತರಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ನಿಜವಾಗಿಯೂ ಏನಾದರೂ ಮಾಡಬೇಕೆಂದರೆ 2023ರ ಕಾನೂನನ್ನು ಮತ್ತೆ ತರಿಸಿ ಈಗಲೇ ಜಾರಿಗೆ ತರಲಿ. ಚಿಕ್ಕ ತಿದ್ದುಪಡಿ ಬೇಕಾದರೆ ಮಾಡಿ, ಆದರೆ ಮಹಿಳೆಯರಿಗೆ ಅವರ ಹಕ್ಕುಗಳನ್ನು ಈಗಲೇ ನೀಡಿ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಲೋಕಸಭೆಯ ಹೇಳಿಕೆಯನ್ನು ಉಲ್ಲೇಖಿಸಿ ಅವರು ಟೀಕಿಸಿದರು. ಕಾಂಗ್ರೆಸ್ ಹಲವು ವರ್ಷಗಳವರೆಗೆ ಆಡಳಿತಕ್ಕೆ ಮರಳುವುದಿಲ್ಲ ಎಂದು ಅವರು ಹೇಳಿದ ಮಾತು ಅವರ ಮನೋಭಾವವನ್ನು ತೋರಿಸುತ್ತದೆ ಎಂದರು.

ಸರ್ಕಾರಕ್ಕೆ ಹಿನ್ನಡೆಯಾಗಿ, ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡಲು ಮತ್ತು ಕ್ಷೇತ್ರ ಮರುವಿಂಗಡಣೆ ನಂತರ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸಲು ಉದ್ದೇಶಿಸಿದ್ದ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ನಿನ್ನೆ ಲೋಕಸಭೆಯಲ್ಲಿ ಸೋಲಾಯಿತು. 298 ಸದಸ್ಯರು ಪರವಾಗಿ, 230 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರೂ, ಅಗತ್ಯವಿದ್ದ ಮೂರನೇ ಎರಡು ಭಾಗ ಬಹುಮತವನ್ನು ಅದು ಪಡೆಯಲಿಲ್ಲ.

ಏಪ್ರಿಲ್ 16ರಿಂದ 18ರವರೆಗೆ ನಡೆದ ವಿಶೇಷ ಮೂರು ದಿನಗಳ ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಸೇರಿ ಹಲವು ಕಾನೂನುಗಳನ್ನು ಪರಿಗಣಿಸಲಾಯಿತು. ಮಸೂದೆ ಸೋಲಿನ ಬಳಿಕ, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ ವಿಂಗಡಣೆಗೆ ಕೊಂಡಿ ಹಾಕುವ ಕ್ರಮವನ್ನು “ಅಪಾಯಕಾರಿ” ಮತ್ತು ಎನ್ ಡಿಎ ಸರ್ಕಾರದ ಕುಟಿಲ ಪ್ರಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com