

ನವದೆಹಲಿ: ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿಯೂ ಸಹ ಸಂಸ್ಕೃತದ ಪ್ರಚಾರ ಮತ್ತು ಅದರ ಬಳಕೆಯನ್ನು ಬೆಂಬಲಿಸುತ್ತಿರುವ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಸೋಮವಾರ, ಭಾರತ ಇನ್ನು ಮುಂದೆ 'ವಿಶ್ವಗುರು' ಅಲ್ಲ ಮತ್ತು ಆ ಪದವನ್ನು ನಾವು ಬಳಸಬಾರದು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ಬಲವಾದ ವಾದವನ್ನು ಮಂಡಿಸಿದರು. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕರು ಹಿಂದೆ ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿಲ್ಲ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ಸಂಸ್ಕೃತ ಭಾರತಿ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಜೋಶಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಭಾರತವು 'ವಿಶ್ವಗುರು' ಆಗಿದ್ದು, ಕೃತಕ ಬುದ್ಧಿಮತ್ತೆಯ ಕೇಂದ್ರವಾಗಿಯೂ ಹೊರಹೊಮ್ಮುತ್ತಿರುವ ಈ ಸಮಯದಲ್ಲಿ ಸಂಸ್ಕೃತದ ಪ್ರಚಾರದಲ್ಲಿ ಭಾರತದ ಪಾತ್ರದ ಕುರಿತು ನಿಮ್ಮ ಅಭಿಪ್ರಾಯ ಏನು ಎಂದು ವರದಿಗಾರರು ಕೇಳಿದಾಗ, "ನಾವು ಈಗ 'ವಿಶ್ವಗುರು' ಅಲ್ಲ. ಇತ್ತೀಚಿನ ದಿನಗಳಲ್ಲಿ ನಾವು ಈ ಪದವನ್ನು ಬಳಸುವುದನ್ನು ತಡೆಯಬೇಕು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ನಾವು 'ವಿಶ್ವಗುರು' ಆಗಲು ಪ್ರಯತ್ನಿಸಬೇಕು. "ವಾಸ್ತವವಾಗಿ, ನಾವು ಒಂದು ಕಾಲದಲ್ಲಿ 'ವಿಶ್ವಗುರು' ಆಗಿದ್ದೆವು. ಆದರೆ ಇಂದಿನ ವಾಸ್ತವವೆಂದರೆ ನಾವು ವಿಶ್ವ ಗುರು ಅಲ್ಲ" ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.
Advertisement