

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡ 7 ರಾಜ್ಯಸಭಾ ಸದಸ್ಯರನ್ನು ಅನರ್ಹಗೊಳಿಸಿ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷವು ಉಪರಾಷ್ಟ್ರಪತಿಗಳಿಗೆ ಆಗ್ರಹಿಸಿದೆ.
ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಈ ಸಂಬಂಧ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಸಂಸದರ ನಡೆ ಆಂಟಿ-ಡಿಫೆಕ್ಷನ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಆಮ್ ಆದ್ಮಿ ಪಕ್ಷದ 7 ರಾಜ್ಯಸಭಾ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದು ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ರಾಜೇಂದರ್ ಗುಪ್ತ, ಸ್ವಾತಿ ಮಲಿವಾಲ್ ಮತ್ತು ವಿಕ್ರಮಜಿತ್ ಸಾಹ್ನಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ನಾಯಕರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಆಮ್ ಆದ್ಮಿ ಪಕ್ಷವು ತನ್ನ ಮೂಲ ಸಿದ್ಧಾಂತಗಳು ಮತ್ತು ಜನಪರ ನೀತಿಗಳಿಂದ ದೂರವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಸಂವಿಧಾನದ ಪ್ರಕಾರ ಎರಡು-ಮೂರನೇ ಸದಸ್ಯರು ಪಕ್ಷ ಬದಲಾಯಿಸಿದರೆ ಅನರ್ಹತೆ ಅನ್ವಯಿಸುವುದಿಲ್ಲ ಎಂಬ ವಾದವನ್ನೂ ಮುಂದಿಟ್ಟಿದ್ದಾರೆ.
ಆದರೆ, ಸಂಜಯ್ ಸಿಂಗ್ ಅವರು ಈ ವಾದವನ್ನು ತಿರಸ್ಕರಿಸಿದ್ದು, ಈ ಪ್ರಕರಣವನ್ನು ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಸೇರಿದಂತೆ ಸಂವಿಧಾನ ತಜ್ಞರು ಈ ವಿಷಯದಲ್ಲಿ ಸಂಸದರ ಮೇಲೆ ಅನರ್ಹತಾ ಕ್ರಮ ಅನ್ವಯಿಸಬಹುದು ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೊತೆಗೆ, ಈ ದಿಢೀರ್ ರಾಜಕೀಯ ಬದಲಾವಣೆ ಪಂಜಾಬ್ ರಾಜ್ಯದ ಜನಾದೇಶಕ್ಕೆ ದ್ರೋಹವಾಗಿದೆ ಎಂದು ಆಪ್ ಆರೋಪಿಸಿದೆ.
ರಾಜಸಭೆಗೆ ಆಯ್ಕೆಯಾದ ಈ ಸಂಸದರು ಪಕ್ಷದ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದು, ನಂತರ ಪಕ್ಷ ಬಿಟ್ಟು ಬಿಜೆಪಿ ಸೇರುವುದು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಪಕ್ಷ ಹೇಳಿದೆ.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಸಭಾ ಅಧ್ಯಕ್ಷರನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕೃತವಾಗಿ ಒತ್ತಾಯಿಸಿದೆ.
ಪ್ರಸ್ತುತ ಈ ಪ್ರಕರಣವು ಸಂವಿಧಾನಾತ್ಮಕ ಹಾಗೂ ರಾಜಕೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ರಾಜ್ಯಸಭಾ ಅಧ್ಯಕ್ಷರ ನಿರ್ಧಾರ ಕುರಿತು ಕುತೂಹಲಗಳು ಹೆಚ್ಚಾಗಿವೆ.
Advertisement