

ಪುಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಇಂದು ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು, 81 ವರ್ಷದ ಅಜಿತ್ ದೋವಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ತಿಲಕ್ ಸ್ಮಾರಕ ಟ್ರಸ್ಟ್ ಪ್ರಕಾರ, ರಾಷ್ಟ್ರೀಯ ಭದ್ರತೆಗೆ ನೀಡಿದ ಮಹತ್ವದ ಕೊಡುಗೆಗಾಗಿ ಅಜಿತ್ ದೋವಲ್ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಜಿತ್ ದೋವಲ್ ತಮ್ಮ ಅಧಿಕಾರವಧಿಯಲ್ಲಿ ರಾಷ್ಟ್ರೀಯ ಭದ್ರತೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು, ರಹಸ್ಯ ಕಾರ್ಯಾಚರಣೆಗಳು ಮತ್ತು ಗಡಿ ಭದ್ರತೆಗೆ ನೀಡಿರುವ ಅವಿಸ್ಮರಣೀಯ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಮಿಜೋರಾಂ, ಸಿಕ್ಕಿಂ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಣಾಯಕ ಸೇನಾ ಕಾರ್ಯಾಚರಣೆಗಳನ್ನು ನಿರ್ವಹಿಸಿದ್ದಾರೆ.
ಭಾರತದ ಅತ್ಯಂತ ದೀರ್ಘಾವಧಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಅವರು, ಭಾರತ-ಚೀನಾ ಗಡಿ ಮಾತುಕತೆಗಳಿಗೆ ಭಾರತದ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಡೋಕ್ಲಾಮ್ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಆಪರೇಷನ್ ಬ್ಲಾಕ್ ಥಂಡರ್, ಡೋಕ್ಲಾಮ್ ವಿವಾದದ ಸಂದರ್ಭದಲ್ಲಿ ರಾಜತಾಂತ್ರಿಕ ಮಾತುಕತೆಗಳು ಮತ್ತು ಬಾಲಕೋಟ್ ವಾಯುದಾಳಿ ಸಮಯದಲ್ಲಿ ಅಜಿತ್ ದೋವಲ್ ಅವರು ಪ್ರಮುಖ ಪಾತ್ರ ವಹಿಸಿದ್ದು, ಇವರ ಸೇವೆಯನ್ನು ಮನಗಂಡ ಲೋಕಮಾನ್ಯ ತಿಲಕ್ ಸ್ಮಾರಕ ಟ್ರಸ್ಟ್ ಈ ಪ್ರಶಸ್ತಿಗೆ ದೋವಲ್ ಅವರಿಗೆ ನೀಡಿದೆ.
1983 ರಲ್ಲಿ ಸ್ಥಾಪಿಸಲಾದ ಲೋಕಮಾನ್ಯ ತಿಲಕ್ ಪ್ರಶಸ್ತಿಯನ್ನು ಮೊದಲು ಸಮಾಜವಾದಿ ನಾಯಕ ಎಸ್ ಎಂ ಜೋಶಿ ಅವರಿಗೆ ನೀಡಲಾಯಿತು ಎಂದು ಟ್ರಸ್ಟ್ ಹೇಳಿದೆ.