

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯಾವುದೇ ರಾಷ್ಟ್ರವೂ ದ್ವಂದ್ವ ನೀತಿ ಅನುಸರಿಸಬಾರದು ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಠಿಣ ಸಂದೇಶ ರವಾನಿಸಿದ್ದಾರೆ.
ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರಿಗೆ ಬೆಂಬಲ ನೀಡುವ ರಾಷ್ಟ್ರಗಳ ವಿರುದ್ಧ ಜವಾಬ್ದಾರಿಯುತ ದೇಶಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಮತ್ತು ಮಾಜಿ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರ ಆತಿಥ್ಯದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ದೋವಲ್, ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳ ವಿರುದ್ಧ ಜವಾಬ್ದಾರಿಯುತ ರಾಷ್ಟ್ರಗಳು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕೆಂದು ಹೇಳಿದರು.
ಜವಾಬ್ದಾರಿಯುತ ರಾಷ್ಟ್ರಗಳು ಭಯೋತ್ಪಾದಕರ ಬೆಂಬಲಿಗರ ಜೊತೆ ನಿಲ್ಲಬೇಕೋ ಅಥವಾ ಅವರನ್ನು ಕಠಿಣ ಕ್ರಮಗಳಿಂದ ತಡೆಯಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ತಿಳಿಸಿದರು.
ಈ ಹೇಳಿಕೆ, ಗಡಿಯಾಚೆ ನಡೆಯುವ ಉಗ್ರ ಚಟುವಟಿಕೆಗಳು ಹಾಗೂ ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ ಕುರಿತು ಭಾರತದ ದೀರ್ಘಕಾಲದ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಬಹುಧ್ರುವೀಯ ವಿಶ್ವದ ಉದಯದ ನಡುವೆ ಅಂತರರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಸವಾಲುಗಳು ಮತ್ತು ಬೆದರಿಕೆಗಳು” ಎಂಬ ವಿಷಯದಡಿ ನಡೆದ ಈ ಸಭೆಯಲ್ಲಿ ಹಲವು ರಾಷ್ಟ್ರಗಳ ಹಿರಿಯ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಜಾಗತಿಕ ಭದ್ರತೆ, ಹಾರ್ಮುಜ್ ಜಲಸಂಧಿಯ ವ್ಯಾಪಾರ ಮಾರ್ಗಗಳ ಸುರಕ್ಷತೆ ಹಾಗೂ ಭಾರತ-ರಷ್ಯಾ ನಡುವಿನ ರಕ್ಷಣಾ ಮತ್ತು ಇಂಧನ ಸಹಕಾರದ ಕುರಿತೂ ಮಹತ್ವದ ಚರ್ಚೆಗಳು ನಡೆದವು.
ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ದ್ವಂದ್ವ ನೀತಿಗೆ ಅವಕಾಶವಿಲ್ಲ. ಕೆಲವು ರಾಷ್ಟ್ರಗಳು ಆಯ್ಕೆಮಾಡಿದ ಕ್ರಮಗಳನ್ನು ಮಾತ್ರ ಅನುಸರಿಸುವುದರಿಂದ ಜಾಗತಿಕ ಭದ್ರತಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಮತ್ತು ಉಗ್ರ ಸಂಘಟನೆಗಳಿಗೆ ಉತ್ತೇಜನ ಸಿಗುತ್ತದೆ ಎಂದು ಅಜಿತ್ ದೋವಲ್ ಅವರು ಎಚ್ಚರಿಸಿದರು.
ಇದೇ ವೇಳೆ, ಎರಡನೇ ಮಹಾಯುದ್ಧದ ನಂತರ ಸ್ಥಾಪಿತವಾದ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ಅಗತ್ಯವಿದೆ ಎಂದ ಅವರು, ಇಂದಿನ ಭದ್ರತಾ ಸವಾಲುಗಳಿಗೆ ತಕ್ಕಂತೆ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದರು.
ಜಾಗತಿಕ ದಕ್ಷಿಣದ ರಾಷ್ಟ್ರಗಳ ಅಭಿಪ್ರಾಯಗಳಿಗೆ ಹೆಚ್ಚಿನ ಪ್ರತಿನಿಧಿತ್ವ ಸಿಗಬೇಕು,” ಎಂದು ಹೇಳುವ ಮೂಲಕ ಜಾಗತಿಕ ಆಡಳಿತದಲ್ಲಿ ಭಾರತಕ್ಕೂ ಹೆಚ್ಚಿನ ಪಾತ್ರ ಸಿಗಬೇಕೆಂಬ ನಿಲುವನ್ನು ದೋವಲ್ ಅವರು ಪುನರುಚ್ಚರಿಸಿದರು.
ಪಶ್ಚಿಮ ಪ್ರಾಚ್ಯ ಅಸ್ಥಿರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಜಾಗತಿಕ ವ್ಯಾಪಾರ ಮಾರ್ಗಗಳ ಭದ್ರತೆ ಅತ್ಯಂತ ಮುಖ್ಯ ಎಂದು ಹೇಳಿದರು.
ಹಾರ್ಮುಜ್ ಜಲಸಂಧಿ ಹಾಗೂ ಕೆಂಪು ಸಮುದ್ರ ಸೇರಿದಂತೆ ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ವ್ಯಾಪಾರ ನಿರಂತರವಾಗಿ ಮತ್ತು ಸುರಕ್ಷಿತವಾಗಿ ಸಾಗಬೇಕು ಎಂದು ತಿಳಿಸಿದರು.
ಸಭೆಯ ನಡುವೆ ದೋವಲ್ ಮತ್ತು ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು.
ರಕ್ಷಣಾ, ಭದ್ರತಾ, ಇಂಧನ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಉಭಯ ನಾಯಕರು ಪರಿಶೀಲಿಸಿದರು. ಜೊತೆಗೆ ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ಕುರಿತೂ ಚರ್ಚೆ ನಡೆಸಿದರು.
Advertisement