ಏರ್ಪೋರ್ಟ್ to ಸೆಮಿಕಂಡಕ್ಟರ್‌, ಆಂಧ್ರಕ್ಕೆ ಬಂಪರ್ ಗಿಫ್ಟ್: ವಿಮಾನ ನಿಲ್ದಾಣ ಉದ್ಘಾಟನೆ ಸೇರಿ 17,900 ಕೋಟಿ ರೂ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಆಂಧ್ರಪ್ರದೇಶದ ವಾಯು ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಪ್ರವಾಸೋದ್ಯಮ, ವ್ಯಾಪಾರ, ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್‌ನ್ನು ಪರಿಶೀಲಿಸಿದರು.
PM Modi Inaugurates Bhogapuram Airport
ಭೋಗಾಪುರ ವಿಮಾನ ನಿಲ್ದಾಣದ ಉದ್ಘಾಟಿಸಿದ ಪ್ರಧಾನಿ ಮೋದಿ
Updated on

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅಭಿವೃದ್ಧಿಗೆ ಹೊಸ ವೇಗ ನೀಡುವ ಮಹತ್ವದ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.

ಇದೇ ವೇಳೆ ರಾಜ್ಯದಲ್ಲಿ 17,900 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. 5,640 ಕೋಟಿ ರೂಪಾಯಿ ಗೂ ಅಧಿಕ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವು ವಾರ್ಷಿಕ ಸುಮಾರು 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಇದರಿಂದ ಆಂಧ್ರಪ್ರದೇಶದ ವಾಯು ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಪ್ರವಾಸೋದ್ಯಮ, ವ್ಯಾಪಾರ, ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್‌ನ್ನು ಪರಿಶೀಲಿಸಿದರು.

ಈ ವೇಳೆ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಉಪಸ್ಥಿತರಿದ್ದರು.

PM Modi Inaugurates Bhogapuram Airport
'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ

ಇನ್ನು ಇಂದು ಉದ್ಘಾಟನೆಯಾದ ಭೋಗಾಪುರಂ ವಿಮಾನ ನಿಲ್ದಾಣದಲ್ಲಿ ಕೃತಕ ಬುದ್ಧಿಮತ್ತೆ (AI), ಬಯೋಮೆಟ್ರಿಕ್ ಪ್ರಯಾಣಿಕರ ಸಂಸ್ಕರಣೆ, ಸ್ವಯಂಚಾಲಿತ ಬ್ಯಾಗೇಜ್ ನಿರ್ವಹಣೆ, ಬಿಲ್ಡಿಂಗ್ ಇನ್‌ಫರ್ಮೇಷನ್ ಮಾಡೆಲಿಂಗ್ ಹಾಗೂ ಸ್ಮಾರ್ಟ್ ಕಾರ್ಯಾಚರಣೆ ಮೇಲ್ವಿಚಾರಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, 5 ಮೆಗಾವ್ಯಾಟ್ ಸೌರ ವಿದ್ಯುತ್ ಘಟಕ, ಮಳೆನೀರು ಕೊಯ್ಲು, ಇಂಧನ ದಕ್ಷ ವ್ಯವಸ್ಥೆಗಳು, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ವ್ಯವಸ್ಥೆ ಹಾಗೂ ತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್‌ನ ವಾಸ್ತುಶಿಲ್ಪವು ಆಂಧ್ರಪ್ರದೇಶದ ಸಾಂಪ್ರದಾಯಿಕ ಚುಟ್ಟಿಲು ಕುಟೀರಗಳು, ಅರಕು ಕಣಿವೆಯ ಪ್ರಕೃತಿ ಸೌಂದರ್ಯ ಹಾಗೂ ಹಾರುವ ಮೀನಿನ ಚಲನೆಯಿಂದ ಸ್ಫೂರ್ತಿ ಪಡೆದಿದೆ.

ಆಂಧ್ರದ ಮೊದಲ ಸೆಮಿಕಂಡಕ್ಟರ್ ಘಟಕಕ್ಕೆ ಶಂಕುಸ್ಥಾಪನೆ

ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ದಕ್ಷಿಣ ಕೊರಿಯಾದ APACT ಸಹಭಾಗಿತ್ವದಲ್ಲಿ ASIP Technologies Pvt Ltd ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.

460 ಕೋಟಿ ರೂಪಾಯಿಗೂ ಅಧಿಕ ಹೂಡಿಕೆಯ ಈ ಘಟಕದಲ್ಲಿ ವಾರ್ಷಿಕ ಸುಮಾರು 9.6 ಕೋಟಿ ಸೆಮಿಕಂಡಕ್ಟರ್ ಚಿಪ್‌ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದರಿಂದ ಹೆಚ್ಚಿನ ಕೌಶಲ್ಯದ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪೂರಕ ಕೈಗಾರಿಕಾ ವ್ಯವಸ್ಥೆ ಬಲಗೊಳ್ಳಲಿದೆ.

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೂ ಬಲ

ಸುಮಾರು 5,550 ಕೋಟಿ ರೂ ವೆಚ್ಚದ ಕರ್ನೂಲ್-IV ನವೀಕರಿಸಬಹುದಾದ ಇಂಧನ ವಲಯ ಪ್ರಸರಣ ವ್ಯವಸ್ಥೆ–ಹಂತ-1ಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಕರ್ನೂಲ್‌ನ ಗಾಳಿ ಮತ್ತು ಸೌರ ವಿದ್ಯುತ್ ವಲಯಗಳು ಹಾಗೂ ಅನಂತಪುರಂ ಮತ್ತು ಕರ್ನೂಲ್‌ನ ಸೌರ ವಿದ್ಯುತ್ ವಲಯಗಳಿಗೆ ಸಂಬಂಧಿಸಿದ ಪ್ರಸರಣ ಯೋಜನೆಗಳಿಗೂ ಚಾಲನೆ ನೀಡಲಾಯಿತು. ದೇಶದ ವಿದ್ಯುತ್ ಗ್ರಿಡ್‌ಗೆ ಹೆಚ್ಚಿನ ಪ್ರಮಾಣದ ಹಸಿರು ವಿದ್ಯುತ್‌ನ್ನು ಸಂಯೋಜಿಸುವುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ.

PM Modi Inaugurates Bhogapuram Airport
ಆಗಸ್ಟ್ 1ರಂದು ಪ್ರಧಾನಿ ಮೋದಿ ಮೈಸೂರು ಭೇಟಿ: ಶಿಲ್ಪಿ ಅರುಣ್ ಯೋಗಿರಾಜ್ ರಿಂದ ಅಮೃತಶಿಲೆಯ ಸ್ವಾಮಿ ವಿವೇಕಾನಂದ ಪ್ರತಿಮೆ ಸಿದ್ಧ; Video

ಹೆದ್ದಾರಿ ಸಂಪರ್ಕಕ್ಕೂ ಭರ್ಜರಿ ಉತ್ತೇಜನ

1,880 ಕೋಟಿ ರೂಪಾಯಿಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಿತು. ರೆಚರ್ಲಾ–ಗುರುವಾಯಗುಡೆಂ ಮತ್ತು ಗುರುವಾಯಗುಡೆಂ–ದೇವರಪಲ್ಲಿ ನಡುವಿನ ನಾಲ್ಕು ಪಥದ ನಿಯಂತ್ರಿತ ಪ್ರವೇಶದ ಗ್ರೀನ್‌ಫೀಲ್ಡ್ ಹೆದ್ದಾರಿ ಮಾರ್ಗಗಳು ಹಾಗೂ NH-67ರ ತಾಡಿಪತ್ರಿ ಬೈಪಾಸ್ ಯೋಜನೆಗಳು ಇದರಲ್ಲಿ ಸೇರಿವೆ.

ಇದಲ್ಲದೆ, NH-565ರ ಪೆಂಚಲಕೋನ–ಯೇರ್ಪೇಡು ವಿಭಾಗದ ಲಿಂಗಸಮುದ್ರಂನಲ್ಲಿ ಹೈ-ಲೆವೆಲ್ ಸೇತುವೆ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಯೋಜನೆಗಳಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ರಸ್ತೆ ಸುರಕ್ಷತೆ ಸುಧಾರಿಸಲಿದೆ. ವಿಶಾಖಪಟ್ಟಣಂ–ಹೈದರಾಬಾದ್ ನಡುವಿನ ಪ್ರಯಾಣದ ಸಮಯವೂ ಕಡಿಮೆಯಾಗುವ ನಿರೀಕ್ಷೆಯಿದೆ.

ಒಟ್ಟಾರೆ, ಭೋಗಾಪುರಂ ಕಾರ್ಯಕ್ರಮದ ಮೂಲಕ ಆಂಧ್ರಪ್ರದೇಶದಲ್ಲಿ ವಿಮಾನಯಾನ, ಸೆಮಿಕಂಡಕ್ಟರ್, ನವೀಕರಿಸಬಹುದಾದ ಇಂಧನ ಮತ್ತು ರಸ್ತೆ ಮೂಲಸೌಕರ್ಯ ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಉತ್ತೇಜನ ದೊರೆತಿದ್ದು, ರಾಜ್ಯದ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ವೇಗ ಸಿಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com