ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಸಿಂಗ್‌ಗೆ ಬಿಗ್ ರಿಲೀಫ್, ದೆಹಲಿ ನ್ಯಾಯಾಲಯದಿಂದ ಖುಲಾಸೆ..!

ಅಪ್ರಾಪ್ತ ಕುಸ್ತಿಪಟುವೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಪೋಕ್ಸೊ (POCSO) ಪ್ರಕರಣದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ರದ್ದುಪಡಿಸುವ ವರದಿಯನ್ನು ದೆಹಲಿ ಪೊಲೀಸರು ಈ ಹಿಂದೆಯೇ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
Brij Bhushan Singh
ಬ್ರಿಜ್ ಭೂಷಣ್ ಸಿಂಗ್
Updated on

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಬಿಗ್ ರಿಲೀಫ್ ನೀಡಿದೆ.

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ನ್ಯಾಯಾಲಯವು ಸಂಪೂರ್ಣವಾಗಿ ಖುಲಾಸೆಗೊಳಿಸಿ (ದೋಷಮುಕ್ತಗೊಳಿಸಿ) ತೀರ್ಪು ಪ್ರಕಟಿಸಿದೆ.

ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ACJM) ಅಶ್ವಿನಿ ಪನ್ವಾರ್ ಅವರು, ಪ್ರಾಸಿಕ್ಯೂಷನ್, ದೂರುದಾರರು ಹಾಗೂ ಆರೋಪಿಗಳ ವಾದಗಳನ್ನು ಆಲಿಸಿದ ಬಳಿಕ ಖುಲಾಸೆ ಆದೇಶ ಪ್ರಕಟಿಸಿದರು. ವಿಚಾರಣೆಯನ್ನು ಗೌಪ್ಯವಾಗಿ (ಇನ್-ಕ್ಯಾಮೆರಾ) ನಡೆಸಲಾಯಿತು.

ಮಹಿಳಾ ಕುಸ್ತಿಪಟುಗಳ ಪರ ಹಿರಿಯ ವಕೀಲೆ ರೆಬೆಕ್ಕಾ ಜಾನ್ ವಾದ ಮಂಡಿಸಿದ್ದರೆ, ಬೃಜ್ ಭೂಷಣ್ ಪರ ವಕೀಲ ರಾಜೀವ್ ಮೋಹನ್ ಹಾಜರಾಗಿದ್ದರು.

2024ರ ಮೇ ತಿಂಗಳಲ್ಲಿ ನ್ಯಾಯಾಲಯ ಬೃಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳಡಿ ಆರೋಪಪಟ್ಟಿ (Charges) ಸಲ್ಲಿಸಿತ್ತು. ಆದರೆ, ದೂರುದಾರೆ ಸಂಖ್ಯೆ 6 ಮಾಡಿದ್ದ ಆರೋಪಗಳಿಂದ ಆಗಲೇ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಇದೇ ಪ್ರಕರಣದಲ್ಲಿ ಸಹ ಆರೋಪಿ ಹಾಗೂ ಡಬ್ಲ್ಯುಎಫ್‌ಐ ಮಾಜಿ ಸಹ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಮೊದಲ ದೂರುದಾರರ ಪ್ರಕರಣದಲ್ಲಿ ಕ್ರಿಮಿನಲ್ ಬೆದರಿಕೆ (ಐಪಿಸಿ ಸೆಕ್ಷನ್ 506(1)) ಆರೋಪ ಮಾತ್ರ ಮುಂದುವರಿಸಲಾಗಿತ್ತು. ಉಳಿದ ಆರೋಪಗಳಿಂದ ಅವರಿಗೆ ಬಿಡುಗಡೆ ನೀಡಲಾಗಿತ್ತು.

Brij Bhushan Singh
ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ವಿರುದ್ಧ ಆರೋಪ ಪಟ್ಟಿಗೆ ದೆಹಲಿ ಕೋರ್ಟ್ ಆದೇಶ

ಇದಕ್ಕೂ ಮುನ್ನ ಆರೋಪಗಳ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಹಾಗೂ ಹೆಚ್ಚುವರಿ ವಾದ ಮಂಡಿಸಲು ಅವಕಾಶ ನೀಡುವಂತೆ ಬೃಜ್ ಭೂಷಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆರೋಪದಲ್ಲಿ ಉಲ್ಲೇಖಿಸಿರುವ ಕೆಲವು ದಿನಗಳಲ್ಲಿ ತಾವು ಭಾರತದಲ್ಲೇ ಇರಲಿಲ್ಲ ಎಂದು ಅವರು ವಾದಿಸಿದ್ದರು.

ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಹಾಗೂ ವಿನೋದ್ ತೋಮರ್ ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದರು. ದೆಹಲಿ ಪೊಲೀಸರು ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 (ಮಹಿಳೆಯ ಮೇಲೆ ಅಸಭ್ಯ ಉದ್ದೇಶದಿಂದ ಹಲ್ಲೆ ಅಥವಾ ಬಲಪ್ರಯೋಗ), 354ಎ (ಲೈಂಗಿಕ ಕಿರುಕುಳ), 354ಡಿ (ಹಿಂಬಾಲಿಸುವುದು), 506(1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ವಿನೋದ್ ತೋಮರ್ ವಿರುದ್ಧ ಸೆಕ್ಷನ್ 109 (ಪ್ರಚೋದನೆ/ಸಹಾಯ) ಕೂಡ ದಾಖಲಾಗಿತ್ತು.

ಅಪ್ರಾಪ್ತ ಕುಸ್ತಿಪಟುವೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಪೋಕ್ಸೊ (POCSO) ಪ್ರಕರಣದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ರದ್ದುಪಡಿಸುವ ವರದಿಯನ್ನು ದೆಹಲಿ ಪೊಲೀಸರು ಈ ಹಿಂದೆಯೇ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮಹಿಳಾ ಕುಸ್ತಿಪಟುಗಳು 2016ರಿಂದ 2019ರ ಅವಧಿಯಲ್ಲಿ ಭಾರತೀಯ ಕುಸ್ತಿ ಫೆಡರೇಷನ್ ಕಚೇರಿ, ಬ್ರಿಜ್ ಭೂಷಣ್ ಅವರ ಅಧಿಕೃತ ನಿವಾಸ ಹಾಗೂ ವಿದೇಶ ಪ್ರವಾಸಗಳ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಇಂದು ಪ್ರಕಟವಾದ ತೀರ್ಪಿನೊಂದಿಗೆ ಆ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ನ್ಯಾಯಾಲಯ ಖುಲಾಸೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com