

ಮುಂಬೈ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿರುವ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಸ್ಟ್ 6 ರಂದು ಜನರಲ್ ಝಡ್ ಮತ್ತು ಜನರಲ್ ಆಲ್ಫಾ ಜೊತೆ ಸಂವಾದ ನಡೆಸಲಿದ್ದಾರೆ.
ಪ್ರಕಟಣೆಯ ಪ್ರಕಾರ, ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ದೇಶದ 100ಕ್ಕೂ ಹೆಚ್ಚು ನಗರಗಳ 15ರಿಂದ 19 ವರ್ಷದೊಳಗಿನ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಭಾರತದ ಅಂತರರಾಷ್ಟ್ರೀಯ ಏಕೀಕರಣ ರಾಷ್ಟ್ರಗಳ ಚಳುವಳಿ(ಐಐಎಂಯುಎನ್) 15 ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
"ನಾಯಕತ್ವ ಎಂದರೆ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲ, ಅವರ ಮಾತುಗಳನ್ನು ಆಲಿಸುವುದೂ ಆಗಿದೆ. ಈ ಮಹತ್ವದ ಘಟ್ಟದಲ್ಲಿ ಇಂತಹ ಸಂವಾದ ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ನಮ್ಮ ಆಹ್ವಾನವನ್ನು ಸ್ವೀಕರಿಸಿ ಈ ಸಮಾವೇಶಕ್ಕೆ ಆಗಮಿಸಲು ಸಮ್ಮತಿಸಿದ ಮೋಹನ್ ಭಾಗವತ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಐಐಎಂಯುಎನ್ ಸಂಸ್ಥಾಪಕ ರಿಷಭ್ ಶಾ ಅವರು ಹೇಳಿದ್ದಾರೆ.