'ರಾಮ ಮಂದಿರ ನಿರ್ಮಾಣವನ್ನೇ ವಿರೋಧಿಸಿದ್ದವರು ಈಗ ದೇಣಿಗೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ'; ವಿಪಕ್ಷಗಳ ವಿರುದ್ಧ ಯೋಗಿ ಆದಿತ್ಯನಾಥ್‌ ವಾಗ್ದಾಳಿ

ಅಯೋಧ್ಯೆ ವಿಚಾರವನ್ನು ಎತ್ತುತ್ತಿರುವವರು ಈ ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದವರು. 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡಿನ ದಾಳಿ ನಡೆಸಿದವರೇ ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ.
UP CM Yogi Adityanath On Encounters
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್
Updated on

ಲಖನೌ: ಅಯೋಧ್ಯೆ ರಾಮ ಮಂದಿರಕ್ಕೆ ಬಂದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ತಿರುಗೇಟು ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣವನ್ನೇ ಹಿಂದೆ ವಿರೋಧಿಸಿದ್ದವರು ಈಗ ದೇಣಿಗೆ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅವರ ದ್ವಂದ್ವ ನಿಲುವನ್ನು ದೇಶವೇ ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ವಿಚಾರವನ್ನು ಎತ್ತುತ್ತಿರುವವರು ಈ ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದವರು. 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡಿನ ದಾಳಿ ನಡೆಸಿದವರೇ ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು, ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಬಂದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವವರು, ದೇವಸ್ಥಾನ ನಿರ್ಮಾಣಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲ. "ರಾಮ ಮಂದಿರ ನಿರ್ಮಾಣವನ್ನು ನ್ಯಾಯಾಲಯದ ಮೂಲಕ ತಡೆಯಲು ಪ್ರಯತ್ನಿಸಿದವರೇ ಇಂದು ದೇಣಿಗೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಅವರ ದ್ವಂದ್ವ ನಿಲುವನ್ನು ದೇಶವೇ ನೋಡುತ್ತಿದೆ ಎಂದು ಟೀಕಿಸಿದರು.

ಇದಕ್ಕೂ ಮುನ್ನ ಮುಂಗಾರು ಅಧಿವೇಶನದ ಮೊದಲ ದಿನ ಸಮಾಜವಾದಿ ಪಕ್ಷ (ಎಸ್‌ಪಿ) ಶಾಸಕರು ವಿಧಾನಸಭೆ ಎದುರು ಪ್ರತಿಭಟನೆ ನಡೆಸಿದರು.

ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮ ಆರೋಪ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯುತ್ ಸಮಸ್ಯೆ ಹಾಗೂ ರಸಗೊಬ್ಬರ ಕೊರತೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿದರು.

UP CM Yogi Adityanath On Encounters
ಅಯೋಧ್ಯೆ ದೇಣಿಗೆ ಲೂಟಿ: FIR ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಎಸ್‌ಪಿ ಹಿರಿಯ ನಾಯಕ ಶಿವಪಾಲ್ ಸಿಂಗ್ ಯಾದವ್, ಕೇವಲ ಮೂರು ದಿನಗಳ ಅಧಿವೇಶನ ಕರೆದಿರುವ ಸರ್ಕಾರ ಜನರ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ತಪ್ಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ, ಸರ್ಕಾರ ಅವುಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆ ವೇಳೆ ಎಸ್‌ಪಿ ಶಾಸಕರು "ಚಂದಾ ಚೋರ್, ಗದ್ದಿ ಛೋಡ್" ಎಂಬ ಘೋಷಣೆಗಳನ್ನು ಕೂಗಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಖನ್ನಾ, ಯಾವುದೇ ಗಂಭೀರ ವಿಷಯವಿಲ್ಲದೆ ಸಮಾಜವಾದಿ ಪಕ್ಷ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ವಿರೋಧ ಪಕ್ಷಕ್ಕೆ ಯಾವುದೇ ಸ್ಪಷ್ಟ ವಿಷಯ ಅಥವಾ ಕಾರ್ಯಸೂಚಿ ಇಲ್ಲ ಎಂದು ಟೀಕಿಸಿದರು.

ಇದೇ ವೇಳೆ, ವಿಧಾನಸಭಾಧ್ಯಕ್ಷ ಸತೀಶ್ ಮಹಾನಾ ಅವರು ಅಧಿವೇಶನದ ವೇಳೆ ಪೂರಕ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದರು. ಮಂಗಳವಾರ ಪೂರಕ ಬಜೆಟ್ ಮಂಡನೆಯಾಗಿ, ಚರ್ಚೆಯ ಬಳಿಕ ಮೂರನೇ ದಿನ ಅಂಗೀಕಾರ ಪಡೆಯಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಈ ಪೂರಕ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸರ್ಕಾರಿ ಯೋಜನೆಗಳ ಅಡುಗೆ ಸಿಬ್ಬಂದಿ ಹಾಗೂ ಗ್ರಾಮ ಚೌಕಿದಾರರಿಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವ ಪ್ರಸ್ತಾವಗಳೂ ಸೇರಿವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com