

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ವು '100 ಪ್ರತಿಶತ' ಎಂಬ ಹೇಳಿಕೆಗಳನ್ನು ಬಳಸಿ ಜೇನುತುಪ್ಪ, ಗೋವಿನ ತುಪ್ಪ ಹಾಗೂ ಖಾದ್ಯ ಎಣ್ಣೆಗಳಂತಹ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಡಾಬರ್ ಇಂಡಿಯಾಗೆ ನಿಷೇಧಿಸಿದೆ.
ಇಂತಹ ಲೇಬಲಿಂಗ್ ಕಾನೂನುಬಾಹಿರವಾಗಿದ್ದು, '100 ಪ್ರತಿಶತ' ಎಂಬ ಹೇಳಿಕೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಜಾಹೀರಾತು ಮತ್ತು ದಾವೆಗಳು) ನಿಯಮಗಳು, 2018ಕ್ಕೆ ವಿರುದ್ಧವಾಗಿವೆ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ. ಇಂತಹ ಹೇಳಿಕೆಗಳು ಅಸ್ಪಷ್ಟವಾಗಿದ್ದು, ಪರಿಶೀಲಿಸಲು ಸಾಧ್ಯವಿಲ್ಲದಂತಿವೆ ಹಾಗೂ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆ ಇದೆ ಎಂದು ನಿಯಂತ್ರಣ ಸಂಸ್ಥೆ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ ಎಫ್‌ಎಸ್‌ಎಸ್‌ಎಐ, '100 ಪ್ರತಿಶತ' ಎಂಬ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ಹೊಂದಿರುವ ಆಹಾರ ಉತ್ಪನ್ನಗಳ ಮಾರಾಟದ ಸಂಬಂಧ ಡಾಬರ್ ಇಂಡಿಯಾ ಲಿಮಿಟೆಡ್ ಗೆ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ತಿಳಿಸಿದೆ. ಇದರಲ್ಲಿ ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ವರ್ಜಿನ್ ತೆಂಗಿನ ಎಣ್ಣೆ, ಎಳ್ಳೆಣ್ಣೆ, ಗೋ ತುಪ್ಪ, ತೆಂಗಿನ ನೀರು, ತೆಂಗಿನ ಹಾಲು ಸೇರಿದಂತೆ ಇತರ ಉತ್ಪನ್ನಗಳು ಸೇರಿವೆ.
ಉಲ್ಲಂಘನೆಗಳ ಬಗ್ಗೆ ವಿವರಿಸಿದ ಎಫ್‌ಎಸ್‌ಎಸ್‌ಎಐ, ಕಂಪನಿಯ ವೆಬ್‌ಸೈಟ್‌ನಲ್ಲಿ ಮಾರಾಟವಾಗುತ್ತಿದ್ದ ಆಹಾರ ಉತ್ಪನ್ನಗಳ ಮೇಲೆ '100% Natural', '100% Pure', '100% Purity Guaranteed', '100% Organic' ಹಾಗೂ '100% Tender Coconut Water' ಎಂಬಂತಹ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ಪ್ರದರ್ಶಿಸಲಾಗುತ್ತಿತ್ತು ಎಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾಬರ್ ಇಂಡಿಯಾ, ಎಫ್‌ಎಸ್‌ಎಸ್‌ಎಐನಿಂದ ನೊಟೀಸ್ ಸ್ವೀಕರಿಸಿದ್ದೇವೆ. ನಮ್ಮ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.
ಇದೇ ವೇಳೆ, ಡಾಬರ್ ಹಿಮಾಲಯನ್ ಆರ್ಗ್ಯಾನಿಕ್ ಆಪಲ್ ಸೈಡರ್ ವಿನೆಗರ್ ಹಾಗೂ ಡಾಬರ್ ಆರ್ಗ್ಯಾನಿಕ್ ಹನಿ ಉತ್ಪನ್ನಗಳ ಮೇಲೆ ಮಾನ್ಯ ಎಫ್‌ಎಸ್‌ಎಸ್‌ಎಐ ಸಾವಯವ ಅನುಮೋದನೆ ಇಲ್ಲದೇ 'ಜೈವಿಕ್ ಭಾರತ್' (Jaivik Bharat) ಲೋಗೊವನ್ನು ಪ್ರದರ್ಶಿಸಲಾಗುತ್ತಿದೆ ಎಂಬುದೂ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.