

ಪಾಟ್ನಾ: ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ತಮ್ಮ ಗೆಲುವು ಬಿಜೆಪಿಯ "ದುರಹಂಕಾರ"ದ ವಿರುದ್ಧದ ಜನಾದೇಶ ಎಂದು ಮಂಗಳವಾರ ಹೇಳಿದ್ದಾರೆ.
30 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಬಂಕಿಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಅವರ ವಿರುದ್ಧ 19,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇಂದು ತಮ್ಮ ಐತಿಹಾಸಿಕ ಗೆಲುವಿನ ಬಗ್ಗೆ ಮಾತನಾಡಿದ ಪ್ರಶಾಂತ್ ಕಿಶೋರ್ ಅವರು, "ಬಂಕಿಪುರದ ಜನ ದುರಹಂಕಾರದ ವಿರುದ್ಧ ಮತ ಚಲಾಯಿಸಿದರು. ಅವರು ಮತ ಚಲಾಯಿಸುವಾಗ ಜಾತಿ ಮೀರಿ ಮತ ಚಲಾಯಿಸಿದ್ದಾರೆ" ಎಂದು ಹೇಳಿದರು.
ಹಲವು ವರ್ಷಗಳಿಂದ ಆರ್‌ಜೆಡಿ ಮತ್ತು ಲಾಲೂ ಪ್ರಸಾದ್ ಯಾದವ್ ಬಗ್ಗೆ ಆತಂಕ ಸೃಷ್ಟಿಸಿ ಬಿಜೆಪಿ ಇಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಕ್ಷೇತ್ರದ ಮತದಾರರು ಆ ಭಯದ ರಾಜಕೀಯವನ್ನು ಬದಿಗೊತ್ತಿ, ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಹಾಗೂ ಗಟ್ಟಿಯಾದ ಪರ್ಯಾಯವಾಗಿ ತಮ್ಮ ಜನ ಸುರಾಜ್ ಪಕ್ಷವನ್ನು ಪೂರ್ಣ ನಂಬಿಕೆಯಿಂದ ಬೆಂಬಲಿಸಿದ್ದಾರೆ ಎಂದರು.
ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!
ತಮ್ಮ ಐತಿಹಾಸಿಕ ಗೆಲುವಿಗೆ ಪ್ರಶಾಂತ್ ಕಿಶೋರ್ ಅವರು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿದ್ದಾರೆ. ಮೊದಲನೆಯದಾಗಿ, ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿ ಆಡಳಿತದ ಮೇಲಿನ ಅಪನಂಬಿಕೆ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿದ್ದ ಆಕ್ರೋಶವೇ ಈ ಗೆಲುವಿಗೆ ಮುಖ್ಯ ಕಾರಣವಾಗಿದೆ. ಜಾತಿ ಮತ್ತು ಕೋಮು ರಾಜಕೀಯವನ್ನು ತೊರೆದು ಉತ್ತಮ ಆಡಳಿತ ನೀಡುವ ಪರ್ಯಾಯದತ್ತ ಮುಖ ಮಾಡಿದ್ದಾರೆ.
ಎರಡನೆಯದಾಗಿ, ಬಿಜೆಪಿಯ ಸ್ಥಳೀಯ ನಾಯಕರ ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರವೇ ಅವರ ಹಿನ್ನಡೆಗೆ ದಾರಿಯಾಯಿತು. ಯಾರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ಗೆಲುವು ಖಚಿತ ಎಂಬ ಬಿಜೆಪಿ ನಾಯಕರ ಭಾವನೆಯ ವಿರುದ್ಧ ಬಂಕಿಪುರ ಜನತೆ ಸ್ಪಷ್ಟವಾಗಿ ಮತ ಚಲಾಯಿಸಿದ್ದಾರೆ.
ಮೂರನೆಯದಾಗಿ, ಬಿಜೆಪಿ ಮತ್ತು ಎನ್‌ಡಿಎ ನಾಯಕರು ತಮ್ಮ ಆಡಳಿತದ ಸಾಧನೆಯ ಆಧಾರದ ಮೇಲೆ ಚುನಾವಣೆ ಎದುರಿಸುವ ಬದಲು, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ಹಿಂದುತ್ವ ರಾಜಕೀಯ ಅಥವಾ ಆರ್‌ಜೆಡಿ ಭಯದ ಮೇಲೆಯೇ ಅವಲಂಬಿತರಾಗಿದ್ದರು. ತಮ್ಮ ಕೆಲಸಗಳಿಗೆ ಹೊಣೆಗಾರರಾಗದ ಇಂತಹ ನಾಯಕರಿಗೆ ಮತದಾರರು ಈ ತೀರ್ಪಿನ ಮೂಲಕ ಸೂಕ್ತ ಪಾಠ ಕಲಿಸಿದ್ದಾರೆ ಎಂದರು.