

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು ಕೆಲ ಗಂಟೆಗಳ ಕಾಲ ತೆಗೆದುಹಾಕಿದ ಪ್ರಕರಣ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಫೇಸ್ ಬುಕ್ ಕ್ಷಮೆಗೆ ಒತ್ತಾಯಿಸಲಾಗಿದೆ.
ವಿಡಿಯೋ ತೆಗೆದು ಹಾಕಿದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದೀಯ ಸಮಿತಿ, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದು, ಮೂರು ದಿನಗಳೊಳಗೆ ಸ್ಪಷ್ಟನೆ ನೀಡದಿದ್ದರೆ ಅವರಿಗೆ ಲಭ್ಯವಿರುವ ಕಾನೂನು ರಕ್ಷಣೆ ಮತ್ತು ವಿನಾಯಿತಿಯನ್ನು ಹಿಂಪಡೆಯುವ ಎಚ್ಚರಿಕೆ ನೀಡಿದೆ.
ಈ ಕುರಿತು ಸಂಸದೀಯ ಸಮಿತಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (MeitY) ಪತ್ರ ಬರೆದಿದ್ದು, ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮತ್ತು ಜೆನ್ ಝಡ್ (Gen Z) ಯುವಕರನ್ನು ಉದ್ದೇಶಿಸಿ ಮಾತನಾಡಿದ್ದ ವಿಡಿಯೋವನ್ನು ತೆಗೆದುಹಾಕಿರುವ ಕ್ರಮವನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ.
ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅದರ ವಿರುದ್ಧ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದ ವಿಡಿಯೋವನ್ನು ಫೇಸ್‌ಬುಕ್‌ನಿಂದ ಸುಮಾರು 5 ರಿಂದ 6 ಗಂಟೆಗಳ ಕಾಲ ತೆಗೆದುಹಾಕಲಾಗಿತ್ತು. ಬಳಿಕ ಅದನ್ನು ಮತ್ತೆ ಮರುಸ್ಥಾಪಿಸಲಾಗಿತ್ತು.
"ವಿದ್ಯಾರ್ಥಿಗಳು ಮತ್ತು ಜೆನ್ ಝಡ್ ಯುವಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದ ವಿಡಿಯೋವನ್ನು 5-6 ಗಂಟೆಗಳ ಕಾಲ ಫೇಸ್‌ಬುಕ್‌ನಿಂದ ತೆಗೆದುಹಾಕಿರುವುದನ್ನು ಸಮಿತಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ" ಎಂದು ಲೋಕಸಭೆ ಸಚಿವಾಲಯದ ನಿರ್ದೇಶಕಿ ಎ. ಜ್ಯೋತಿರ್ಮಯಿ ಸಹಿ ಮಾಡಿರುವ ಪತ್ರದಲ್ಲಿ ತಿಳಿಸಲಾಗಿದೆ.
ಗೂಗಲ್ ಇಂಡಿಯಾ ವಿರುದ್ಧವೂ ಕ್ರಮಕ್ಕೆ ಸೂಚನೆ
ಇದೇ ವೇಳೆ, ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಗಲ್ ಇಂಡಿಯಾ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಂಸದೀಯ ಸಮಿತಿ ಸರ್ಕಾರಕ್ಕೆ ಸೂಚಿಸಿದೆ. ವಂಚಕ ಆ್ಯಪ್‌ಗಳ ಮೂಲಕ ಹೂಡಿಕೆ ಮಾಡಿ 48 ಲಕ್ಷ ರೂ.ಗಿಂತ ಹೆಚ್ಚು ಹಣ ಕಳೆದುಕೊಂಡಿರುವುದಾಗಿ ದೂರುದಾರರು ಆರೋಪಿಸಿರುವ ಪ್ರಕರಣದ ಕುರಿತು ಚರ್ಚೆ ನಡೆಸಿದ ಬಳಿಕ ಈ ಸೂಚನೆ ನೀಡಲಾಗಿದೆ.
ಹೈದರಾಬಾದ್ ಸೈಬರ್ ಪೊಲೀಸರು ಸೈಬರ್ ವಂಚಕರೊಂದಿಗೆ ಗೂಗಲ್ ಇಂಡಿಯಾ ಮುಖ್ಯಸ್ಥರನ್ನು ಸಹ ಆರೋಪಿಯನ್ನಾಗಿ ಪರಿಗಣಿಸಿ ನಡೆಸಿದ ಕ್ರಮದ ಕುರಿತು ಸಮಿತಿ ಚರ್ಚಿಸಿದ್ದು, ಇದೇ ರೀತಿಯ ಕ್ರಮವನ್ನು ಭಾರತ ಸರ್ಕಾರವು ಗೂಗಲ್ ಇಂಡಿಯಾ ವಿರುದ್ಧವೂ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.