

ಮೊರ್ಬಿ (ಗುಜರಾತ್): ಗುಜರಾತ್‌ನ ಮೊರ್ಬಿ ಜಿಲ್ಲೆಯ ವಿರ್ಪರ್ಡಾ ಗ್ರಾಮದಲ್ಲಿ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೃಷಿ ಜಮೀನೊಂದರಲ್ಲಿರುವ 18 ಅಡಿ ಆಳದ ತೆರೆದ ಬಾವಿಯಲ್ಲಿ ನೀರು ಅಲೆಗಳಂತೆ ಏರಿಳಿಯುತ್ತಿದ್ದು, ಸಮುದ್ರದ ಅಲೆಗಳಂತೆ ನೀರು ನಿರಂತರವಾಗಿ ಉಕ್ಕಿ ಹರಿಯುತ್ತಿದೆ.
ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮುಗಿಬೀಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ.
ವಿರ್ಪರ್ಡಾ ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ ಈ ಬಾವಿ ಇತ್ತೀಚಿನ ಭಾರಿ ಮಳೆಗೆ ಸಂಪೂರ್ಣವಾಗಿ ತುಂಬಿತ್ತು. ಆದರೆ, ಇದ್ದಕ್ಕಿದ್ದಂತೆ ಬಾವಿಯ ಒಳಗಿನಿಂದ ಭಾರಿ ಪ್ರಮಾಣದ ಅಲೆಗಳು ಏಳಲು ಆರಂಭಿಸಿದ್ದು, ನೀರು ಹೊರಕ್ಕೆ ಚಿಮ್ಮುತ್ತಿದೆ.
ಸುತ್ತಮುತ್ತಲಿನ ಉಳಿದ ಬಾವಿಗಳಲ್ಲಿ ನೀರು ಶಾಂತವಾಗಿದ್ದರೂ, ಈ ಒಂದು ಬಾವಿಯಲ್ಲಿ ಮಾತ್ರ ನೀರು ಅಲೆಗಳಂತೆ ಏರಿಳಿಯುತ್ತಿದೆ. ಈ ಬೆಳವಣಿಗೆ ಜನರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದ್ದು, ಭೂಕಂಪದ ಮುನ್ಸೂಚನೆ ಇರಬಹುದು ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.
ಈ ನಡುವೆ ಸ್ಥಳಕ್ಕೆ ಭೇಟಿ ನೀಡಿದ ಮೊರ್ಬಿ ಜಿಲ್ಲಾ ಭೂವಿಜ್ಞಾನಿ ಜೆ. ಎಸ್. ವಧೇರ್ ಅವರು ಇದೊಂದು ಸಂಪೂರ್ಣ ನೈಸರ್ಗಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಾಂಧಿನಗರದ ಇನ್‌ಸ್ಟಿಟ್ಯೂಟ್ ಆಫ್ ಸೀಸ್ಮೋಲಾಜಿಕಲ್ ರಿಸರ್ಚ್ (ISR) ಸಂಸ್ಥೆಯೂ ಸಹ ಈ ಭಾಗದಲ್ಲಿ ಯಾವುದೇ ಭೂಕಂಪನ ಚಟುವಟಿಕೆಗಳು ದಾಖಲಾಗಿಲ್ಲ ಎಂದು ಖಚಿತಪಡಿಸಿದೆ.
ಹಾಗಿದ್ದರೆ ಬಾವಿಯ ನೀರು ಅಲೆಗಳಂತೆ ಏರಿಳಿಯುತ್ತಿರುವುದೇಕೆ..?
ಭೂಗರ್ಭಶಾಸ್ತ್ರಜ್ಞರ ಪ್ರಕಾರ, ಇದಕ್ಕೆ ಜಲವಿಜ್ಞಾನದಲ್ಲಿ "ವೆಲ್ ಸೈಶ್" (Well Seiche) ಎಂದು ಕರೆಯಲಾಗುತ್ತದೆ. ಭಾರಿ ಮಳೆಯಿಂದಾಗಿ ಭೂಮಿಯ ಒಳಗಿನ ಅಂತರ್ಜಲ ಮಟ್ಟ ಹಠಾತ್ತಾಗಿ ಹೆಚ್ಚಾಗಿದೆ.
ಭೂಗರ್ಭದ ಬಂಡೆಗಳ ರಂಧ್ರಗಳಲ್ಲಿದ್ದ ಗಾಳಿಯನ್ನು ನೂಕಿ ನೀರು ನುಗ್ಗಿದಾಗ, ಆ ಗಾಳಿಯು ತೀವ್ರ ಒತ್ತಡದೊಂದಿಗೆ ಹೊರಬರಲು ಯತ್ನಿಸಿದೆ. ಈ ರೀತಿ ಸಿಲುಕಿಕೊಂಡ ಗಾಳಿಯು ಬಾವಿಯ ಕೆಳಭಾಗದಿಂದ ಜಲಸ್ಥಿತಿಯ ಒತ್ತಡವನ್ನು (Hydrostatic pressure) ಸೃಷ್ಟಿಸುತ್ತಿದೆ. ಈ ಒತ್ತಡ ಹಾಗೂ ಮೇಲ್ಮೈ ಗಾಳಿಯ ಕಾರಣದಿಂದಾಗಿ ಬಾವಿಯ ನೀರು ನಿರಂತರವಾಗಿ ಅಲೆಗಳಂತೆ ಏರಿಳಿಯುತ್ತಿದೆ ಎಂದು ಹೇಳಿದ್ದಾರೆ.
ಈ ನಡುವೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಮೂಢನಂಬಿಕೆಗಳು ಹರಡದಂತೆ ತಡೆಯಲು ಮೊರ್ಬಿ ಜಿಲ್ಲಾಧಿಕಾರಿ ಸ್ವಪ್ನಿಲ್ ಖರೆ ಅವರು ಗ್ರೌಂಡ್ ವಾಟರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (GWRI) ತಂಡವನ್ನು ವಿಸ್ತೃತ ತನಿಖೆಗೆ ನಿಯೋಜಿಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.
ಈ ಬಾವಿಯ ಮಾಲೀಕರಾದ ಪ್ರಾಣಜೀವನ್ ಸದಾರಿಯಾ ಅವರು ಮಾತನಾಡಿ, "ಆಗಸ್ಟ್ 2ರಂದು ಹೊಲಕ್ಕೆ ಬಂದಾಗ ಬಾವಿಯ ನೀರು ಹೊರಗೆ ಉಕ್ಕಿ, ಅಲೆಗಳಂತೆ ಏರಿಳಿಯುತ್ತಿರುವುದು ಕಂಡು ಬಂದಿತ್ತು. ಆಗಿನಿಂದ ಇಂದಿನವರೆಗೂ ಇದೇ ಸ್ಥಿತಿ ಮುಂದುವರಿದಿದೆ. ಸುಮಾರು ಮೂರು ತಿಂಗಳ ಹಿಂದೆಯಷ್ಟೇ ಈ ಬಾವಿಯನ್ನು ನಿರ್ಮಿಸಲಾಗಿತ್ತು" ಎಂದು ತಿಳಿಸಿದ್ದಾರೆ.