ಪ್ರಧಾನಿ ಮೋದಿ Instagram ರೀಲ್‌ಗೆ ಮತ್ತೆ ದೀಪ್ಕೆ ಟಾಂಗ್‌! 'Prime Influencer' ಎಂದು ವ್ಯಂಗ್ಯ..!

ಪ್ರಧಾನಿಯ ಈ ರೀಲ್‌ಗೆ ಪ್ರತಿಕ್ರಿಯಿಸಿರುವ ಅಭಿಜೀತ್‌ ದೀಪ್ಕೆ, "Prime Influencer" ಎಂದು ಕಾಮೆಂಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
Abhijeet Dipke
ಅಭಿಜಿತ್ ದೀಪ್ಕೆ, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ 'ಗೆಟ್‌ ರೆಡಿ ವಿತ್‌ ಮೀ' (GRWM) ರೀಲ್‌ಗೆ ಕಾಕ್‌ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್‌ ದೀಪ್ಕೆ ವ್ಯಂಗ್ಯವಾಡಿದ್ದಾರೆ.

ಮೋದಿ ಅವರನ್ನು 'ಪ್ರೈಮ್‌ ಇನ್‌ಫ್ಲೂಯೆನ್ಸರ್‌' ಎಂದು ಉಲ್ಲೇಖಿಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಟಾಂಗ್‌ ನೀಡಿದ್ದಾರೆ.

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ರೀಲ್‌ ಹಂಚಿಕೊಂಡಿದ್ದು, ದೇಶದ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳು ಹಾಗೂ ಸ್ಥಳೀಯ ನೇಕಾರಿಕೆಯ ವಸ್ತ್ರಗಳನ್ನು ಜನಪ್ರಿಯಗೊಳಿಸಲು ಡಿಜಿಟಲ್‌ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಜೊತೆಗೆ, #GRWM ಸೇರಿದಂತೆ ನಿಗದಿತ ಹ್ಯಾಶ್‌ಟ್ಯಾಗ್‌ಗಳೊಂದಿಗೆ ತಮ್ಮ 'ಗೆಟ್‌ ರೆಡಿ ವಿತ್‌ ಮೀ' ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ದೇಶೀಯ ಜವಳಿ ಮತ್ತು ಕೈಮಗ್ಗ ಉತ್ಪನ್ನಗಳ ಬಗ್ಗೆ ಹೆಚ್ಚಿನ ಜನರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿಯ ಈ ರೀಲ್‌ಗೆ ಪ್ರತಿಕ್ರಿಯಿಸಿರುವ ಅಭಿಜೀತ್‌ ದೀಪ್ಕೆ, "Prime Influencer" ಎಂದು ಕಾಮೆಂಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

Abhijeet Dipke
ದೇಶದ ಭವಿಷ್ಯಕ್ಕಿಂತ ನಿಮ್ಮ ಚರ್ಮವೇ ಹೆಚ್ಚು ಹೊಳೆಯುತ್ತಿದೆ: ಪ್ರಧಾನಿ ಮೋದಿ ಸೆಲ್ಫೀ ವೀಡಿಯೋ ಕುರಿತು CJP ವ್ಯಂಗ್ಯ..!

ಪ್ರಧಾನಿ ಮೋದಿ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ದೀಪ್ಕೆ ಟೀಕೆ ವ್ಯಕ್ತಪಡಿಸಿರುವುದು ಇದು ಮೊದಲೇನಲ್ಲ. ಕಳೆದ ವಾರವೂ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ–2026 ರಾಜ್ಯಸಭೆಯಲ್ಲಿ ಅಂಗೀಕಾರವಾದ ಬಳಿಕ ಪ್ರಧಾನಿ ಮೋದಿ ಹಂಚಿಕೊಂಡಿದ್ದ ರೀಲ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.

ಆ ವೇಳೆ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ವಿಡಿಯೊ ಸಂದೇಶದಲ್ಲಿ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಅಭಿಜೀತ್‌ ದೀಪ್ಕೆ, "ದೇಶದ ಭವಿಷ್ಯಕ್ಕಿಂತ ನಿಮ್ಮ ಚರ್ಮವೇ ಹೆಚ್ಚು ಹೊಳೆಯುತ್ತಿದೆ" ಎಂದು ಕಾಮೆಂಟ್‌ ಮಾಡಿದ್ದರು. ಆ ಕಾಮೆಂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈಗ ರಾಷ್ಟ್ರೀಯ ಕೈಮಗ್ಗ ದಿನದ ರೀಲ್‌ಗೂ 'ಪ್ರೈಮ್‌ ಇನ್‌ಫ್ಲೂಯೆನ್ಸರ್‌' ಎಂದು ವ್ಯಂಗ್ಯವಾಡಿರುವ ದೀಪ್ಕೆ ಅವರ ಪ್ರತಿಕ್ರಿಯೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com