

ರಾಂಚಿ: ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ ಪದವೀಧರ ಮಟ್ಟದ ಪರೀಕ್ಷೆಯ ಪ್ರಶ್ನೆಪತ್ರಿಕೆ 2024ರಲ್ಲಿ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
ಆದರೆ, ರಾಜ್ಯ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿ ಪರೀಕ್ಷೆಗೆ ಕ್ಲೀನ್‌ಚಿಟ್ ನೀಡಿತ್ತು. ಇದೀಗ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಹೇಗೆ ಎಂಬುದರ ಕುರಿತು ರಾಜ್ಯ CID ನಡೆಸಿದ ತನಿಖೆಯ ಪ್ರಮುಖ ಮಾಹಿತಿ ಬಹಿರಂಗವಾಗಿದೆ.
ನೇಮಕಾತಿ ಪರೀಕ್ಷೆಗಳಲ್ಲಿ ಸುಧಾರಣೆ ತರಬೇಕು ಎಂದು ಒತ್ತಾಯಿಸಿ ರಾಂಚಿಯಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಈ CID ವರದಿ ಮುನ್ನೆಲೆಗೆ ಬಂದಿದೆ.
CID ವರದಿ ಪ್ರಕಾರ, JSSC ಪ್ರಶ್ನೆಪತ್ರಿಕೆ ಸೋರಿಕೆಯಾಗಿ ವಾಟ್ಸ್‌ಆ್ಯಪ್ ಮೂಲಕ ಹರಿದಾಡಿತ್ತು. ಹಣ ಪಾವತಿಸಿದವರಿಗೆ ಹಜಾರಿಬಾಗ್, ಜಮ್ಶೆಡ್‌ಪುರ, ಪಾಟ್ನಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಸ್ಥಳಗಳಲ್ಲಿ ಉತ್ತರಗಳನ್ನು ನೀಡಲಾಗಿತ್ತು. ನೇಪಾಳದಲ್ಲಿಯೂ ಕೆಲವರಿಗೆ ಉತ್ತರಗಳು ಲಭ್ಯವಾಗಿದ್ದವು ಎಂದು ವರದಿ ಹೇಳಿದೆ.
2025ರಲ್ಲಿ ರಾಜ್ಯ ಸರ್ಕಾರ CID ವರದಿಯನ್ನು ಬದಿಗೊತ್ತಿ ಮತ್ತೊಂದು ತನಿಖೆಗೆ ಆದೇಶಿಸಿತು. ಎರಡನೇ ತನಿಖೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪವನ್ನು ತಳ್ಳಿಹಾಕಲಾಗಿದ್ದು, ಪರೀಕ್ಷೆಗೆ ಮತ್ತೆ ಕ್ಲೀನ್‌ಚಿಟ್ ನೀಡಲಾಯಿತು. ಇದರ ನಡುವೆ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲೂ ಇದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿತು. ಇದರಿಂದ ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿತು.
ಲ್ಯಾಂಡ್‌ಲೈನ್ ಫೋನ್ ಮೂಲಕ ಉತ್ತರ
ಹಿಂದಿನ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಿಂದ ರದ್ದಾದ ಬಳಿಕ JSSC ಮರುಪರೀಕ್ಷೆಯನ್ನು 2024ರ ಸೆಪ್ಟೆಂಬರ್ 21 ಮತ್ತು 22ರಂದು ನಡೆಸಲಾಗಿತ್ತು. ಮರುಪರೀಕ್ಷೆಯಲ್ಲೂ ಸೋರಿಕೆ ಆಗಬಹುದು ಎಂಬ ಭೀತಿಯಿಂದ ಜಾರ್ಖಂಡ್‌ನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಆದರೂ ಸೋರಿಕೆ ನಡೆದಿತ್ತು ಎಂದು ಪರೀಕ್ಷಾರ್ಥಿಯೊಬ್ಬರು ಆರೋಪಿಸಿದ್ದಾರೆ. ಲ್ಯಾಂಡ್‌ಲೈನ್ ಫೋನ್ ಮೂಲಕ ಉತ್ತರಗಳನ್ನು ನೀಡಲಾಗಿತ್ತು. ಕೆಲವರಿಗೆ ಉತ್ತರಗಳನ್ನು ಹೇಳಿಯೂ ಬರೆಯಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
“ನಮಗೆ ಪ್ರಶ್ನೆಗಳು ಸಿಕ್ಕಿರಲಿಲ್ಲ, ಉತ್ತರಗಳು ಮಾತ್ರ ಸಿಕ್ಕಿದ್ದವು. ಪರೀಕ್ಷೆ ಮುಗಿದ ಬಳಿಕ ಅವು ಸರಿಯಾಗಿದ್ದವು ಎಂಬುದು ಖಚಿತವಾಯಿತು. ಈ ಕುರಿತು ವರದಿಯನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದೇವೆ,” ಎಂದು ಜೀತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೀತ್ ಕುಮಾರ್ ಸೇರಿದಂತೆ ಕೆಲವರು ರಾಂಚಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಉತ್ತರಗಳ ಫೋಟೋಕಾಪಿಯನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದ್ದು, ಕೆಲವರು ಪರೀಕ್ಷೆಗೂ ಮುನ್ನ ತಮ್ಮ ಸ್ನೇಹಿತರೊಂದಿಗೆ ಪ್ರಶ್ನೆಗಳನ್ನು ಚರ್ಚಿಸುವಾಗ ಉತ್ತರಗಳನ್ನು ಬರೆದುಕೊಂಡಿದ್ದರು ಎಂದು ಕುಮಾರ್ ಹೇಳಿದ್ದಾರೆ.
ಒಂದು ಫೋಟೋದಲ್ಲಿ 2024ರ ಸೆಪ್ಟೆಂಬರ್ 22ರಂದು ಬೆಳಗ್ಗೆ 7:23ರ ಟೈಮ್‌ಸ್ಟ್ಯಾಂಪ್ ಇತ್ತು. ಅಂದರೆ ಪರೀಕ್ಷೆ ಆರಂಭಕ್ಕೂ ಮುನ್ನವೇ ಫೋಟೋ ತೆಗೆದಿರುವುದು ತಿಳಿದುಬಂದಿದೆ. ಅದರ ಸ್ಥಳ ಜಮ್ಶೆಡ್‌ಪುರದ ಬಿಷ್ಣುಪುರ ಎಂದು ದಾಖಲಾಗಿತ್ತು. 2025ರ ಮಾರ್ಚ್‌ನಲ್ಲಿ CID ತನಿಖೆ ಪೂರ್ಣಗೊಳಿಸಿತ್ತು. 150 ಪ್ರಶ್ನೆಗಳ ಪೈಕಿ 120 ಪ್ರಶ್ನೆಗಳು ಸೋರಿಕೆಯಾಗಿದ್ದವು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿತ್ತು.
2ನೇ SIT ತನಿಖೆಯಲ್ಲಿ ಸೋರಿಕೆ ಇಲ್ಲ ಎಂದ ಸರ್ಕಾರ
CID ವರದಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರ ಅದನ್ನು ಬದಿಗೊತ್ತಿ ಎರಡನೇ SIT ರಚಿಸಿತು. ಈ ತನಿಖೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪವನ್ನು ತಳ್ಳಿಹಾಕಲಾಯಿತು. ಬಳಿಕ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬರಲಿಲ್ಲ ಎಂದು ವರದಿಯಾಗಿದೆ. ಇದರಿಂದ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಯಿತು. JPSC ಪರೀಕ್ಷೆಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದ ಬಳಿಕ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ಆರಂಭಿಸಿದರು.
ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ನೇತೃತ್ವದಲ್ಲಿ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಭಟನೆ 16ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ, ಇನ್ನೂ ಯಾವುದೇ ಪರಿಹಾರ ಕಂಡುಬಂದಿಲ್ಲ. ವಿದ್ಯಾರ್ಥಿಗಳೊಂದಿಗೆ ಮಾತುಕತೆಯಲ್ಲಿ ಭಾಗಿಯಾಗಿದ್ದ ಜಾರ್ಖಂಡ್ ಸಚಿವೆ ದೀಪಿಕಾ ಸಿಂಗ್, ವಿದ್ಯಾರ್ಥಿಗಳ ಆತಂಕಗಳು ನ್ಯಾಯಸಮ್ಮತವಾಗಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
“ವಿದ್ಯಾರ್ಥಿಗಳು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಮತ್ತು ನ್ಯಾಯಸಮ್ಮತವಾದ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ. ಸ್ವಲ್ಪ ಸಮಯ ಕಾಯೋಣ, ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ” ಎಂದು ಅವರು ಹೇಳಿದ್ದಾರೆ.