

ನವದೆಹಲಿ: ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ವಾರ್ಷಿಕವಾಗಿ ರೂ. 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ (PM-JAY) ನಿಯಮಗಳನ್ನು ಉಲ್ಲಂಘಿಸಿದ ಮತ್ತು ರೋಗಿಗಳ ಹೆಸರಿನಲ್ಲಿ ವಂಚನೆ ಎಸಗಿದ ಕಾರಣಕ್ಕಾಗಿ ದೇಶಾದ್ಯಂತ 2,359 ಆಸ್ಪತ್ರೆಗಳನ್ನು ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ. ಜೊತೆಗೆ, 1,200ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಅಮಾನತು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ಲೋಕಸಭೆಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಮತ್ತು ರೋಗಿಗಳ ಹೆಸರಿನಲ್ಲಿ ವಂಚನೆ ಎಸಗಿದ ಕಾರಣಕ್ಕಾಗಿ ದೇಶಾದ್ಯಂತ 2,359 ಆಸ್ಪತ್ರೆಗಳನ್ನು ಯೋಜನೆಯಿಂದ ಹೊರಗಿಡಲಾಗಿದ್ದು, 1,200ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆಸ್ಪತ್ರೆಗಳ ಮೇಲೆ ಒಟ್ಟು ₹328.49 ಕೋಟಿ ದಂಡ ವಿಧಿಸಲಾಗಿದ್ದು, 29 FIR ದಾಖಲಿಸಲಾಗಿದೆ ಎಂದು ತಿಳಿಸಿದರು.
ಮುಂದುವರೆದು, ನ್ಯಾಷನಲ್ ಹೆಲ್ತ್ ಅಥಾರಿಟಿ ಅಡಿಯಲ್ಲಿರುವ ಆಂಟಿ-ಫ್ರಾಡ್ ಯುನಿಟ್, ವಂಚನೆಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತಿದೆ. ಅದರಂತೆ, ಕ್ಲೈಮ್ ಸಲ್ಲಿಕೆಯಾದ 24 ಗಂಟೆಗಳ ಒಳಗೆ ನಕಲಿ ಕ್ಲೈಮ್‌ಗಳು, ಅನಗತ್ಯ ವೈದ್ಯಕೀಯ ಚಿಕಿತ್ಸೆಗಳು ಅಥವಾ ರೋಗಿಗಳ ಗುರುತಿನ ದುರ್ಬಳಕೆಯನ್ನು ಈ ತಂತ್ರಜ್ಞಾನ ಗುರುತಿಸುತ್ತದೆ. ಇದರಿಂದಾಗಿ ಈವರೆಗೆ ಸುಮಾರು ₹676.14 ಕೋಟಿ ನಷ್ಟವನ್ನು ತಡೆಯಲಾಗಿದೆ.
ಏತನ್ಮಧ್ಯೆ, ವಂಚನೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ, ಯೋಜನೆಯ ವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ಅದರಂತೆ, ದೇಶದಲ್ಲಿ ಸದ್ಯ 38,437 ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯಡಿ ನೋಂದಾಯಿತವಾಗಿವೆ (ಇದರಲ್ಲಿ 20,363 ಸರ್ಕಾರಿ ಮತ್ತು 18,074 ಖಾಸಗಿ ಆಸ್ಪತ್ರೆಗಳು ಸೇರಿವೆ). ಜೊತೆಗೆ ಕಳೆದ ಆರ್ಥಿಕ ವರ್ಷದಲ್ಲಿ (2025-26) 3.75 ಕೋಟಿ ಹೊಸ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 2.74 ಕೋಟಿ ಜನ ಆಸ್ಪತ್ರೆಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆದಿದ್ದಾರೆ.