

ನವದೆಹಲಿ: ನಿರ್ಜನ ರಸ್ತೆಗೆ ಕರೆದೊಯ್ಯುತ್ತಿದ್ದ ಚಾಲಕನ ಮೇಲೆ ಅನಮಾನಗೊಂಡ ಮಹಿಳೆ ಚಲಿಸುತ್ತಿದ್ದ ಬೈಕ್ ಟ್ಯಾಕ್ಸಿಯಿಂದಲೇ ಹಾರಿ ಪರಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಆಯೇಷಾ ಶ್ರೀವಾಸ್ತವ್ ಎಂಬುವವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದು, ಅಪರಿಚಿತ ಹಾಗೂ ನಿರ್ಜನ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದಾಗ ಅನುಮಾನಗೊಂಡು ಚಲಿಸುತ್ತಿದ್ದ ಬೈಕ್ ನಿಂದ ಹಾರಿದ್ದಾಗಿ ಹೇಳಿಕೊಂಡಿದ್ದಾರೆ.
ಚಾಲಕ ಅಪರಿಚಿತ ಹಾಗೂ ನಿರ್ಜನ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದಾಗ ಅನುಮಾನಗೊಂಡ ಅವರು, ಪದೇಪದೇ ಮನವಿ ಮಾಡಿದರೂ ಬೈಕ್ ನಿಲ್ಲಿಸದ ಹಿನ್ನೆಲೆಯಲ್ಲಿ ಜೀವಭಯದಿಂದ ಚಲಿಸುತ್ತಿದ್ದ ಬೈಕ್‌ನಿಂದಲೇ ಹಾರಿದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಆಯೇಷಾ ಅವರಿಗೆ ಗಾಯಗಳು ಕೂಡ ಆಗಿವೆ ಎಂದು ಹೇಳಿಕೊಂಡಿದ್ದಾರೆ.
ಪ್ರತಿದಿನ ಸಾವಿರಾರು ಮಹಿಳೆಯರು ಸಂಚಾರಕ್ಕಾಗಿ Rapido ಬಳಸುತ್ತಾರೆ. ಇಲ್ಲಿ ಸುರಕ್ಷತೆಯೇ ದೊಡ್ಡ ಪ್ರಶ್ನೆಯಾಗಿದೆ. ಆ ಚಾಲಕನಿಗೆ ಶಿಕ್ಷೆಯಾಗಬೇಕು ಎಂದು ವಿಡಿಯೋದಲ್ಲಿ ಮಹಿಳೆ ಆಗ್ರಹಿಸಿದ್ದರು.
ಆಗಿದ್ದೇನು?
ವಿಡಿಯೋದಲ್ಲಿ ಆಯೇಷಾ ಹೇಳಿಕೊಂಡಿರುವಂತೆ, ಕಚೇರಿಗೆ ತೆರಳಲು ಆಕೆ Rapido ಬೈಕ್ ಬುಕ್ ಮಾಡಿದ್ದರು. ಆದರೆ ಚಾಲಕ ದೆಹಲಿ ವಿಶ್ವವಿದ್ಯಾಲಯದತ್ತ ಅಪರಿಚಿತ ಮಾರ್ಗದಲ್ಲಿ ತೆರಳುತ್ತಿದ್ದುದನ್ನು ಗಮನಿಸಿದರು.
ಈ ವೇಳೆ ಚಾಲಕನಿಗೆ ಮಾರ್ಗ ಬದಲಿಸುವಂತೆ ಅಥವಾ ಬೈಕ್ ನಿಲ್ಲಿಸುವಂತೆ ಮನವಿ ಮಾಡಿದ್ದರು. ಚಾಲಕ ಸ್ಪಂದಿಸದ ಹಿನ್ನೆಲೆಯಲ್ಲಿ ಆತನನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಕೊನೆಗೆ ಬೈಕ್‌ನಿಂದ ಜಿಗಿದಿದ್ದಾರೆ. ಘಟನೆಯಲ್ಲಿ ಅವರ ಕೈ, ಕಾಲು ಹಾಗೂ ತಲೆಗೆ ಗಾಯಗಳಾಗಿವೆ.
Rapido ಗ್ರಾಹಕ ಸೇವೆಯಿಂದ ತಕ್ಷಣ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಆಯೇಷಾ ಸಾಮಾಜಿಕ ಮಾಧ್ಯಮದಲ್ಲಿ ಘಟನೆ ಹಂಚಿಕೊಂಡು ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
Rapido ಪ್ರತಿಕ್ರಿಯೆ
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ Rapido ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಆರೋಪಗಳ ಗಂಭೀರತೆಯನ್ನು ಪರಿಗಣಿಸಿರುವುದಾಗಿ ಹೇಳಿದೆ. ಅಲ್ಲದೆ “ದೂರವಾಣಿ ಮೂಲಕ ನಿಮ್ಮೊಂದಿಗೆ ಚರ್ಚಿಸಿದಂತೆ, ಈ ವಿಷಯವನ್ನು ನಾವು ಸಂಪೂರ್ಣವಾಗಿ ಗಂಭೀರವಾಗಿ ಪರಿಗಣಿಸಿದ್ದೇವೆ.
ವರದಿಯಾಗಿರುವ ಕ್ಯಾಪ್ಟನ್‌ರನ್ನು ನಮ್ಮ ಪ್ಲಾಟ್‌ಫಾರ್ಮ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ಅಗತ್ಯ ಕಾನೂನು ಕ್ರಮಕ್ಕಾಗಿ ಕ್ಯಾಪ್ಟನ್‌ರ ವಿವರಗಳನ್ನು ಇ-ಮೇಲ್ ಮೂಲಕ ನಿಮಗೆ ಹಂಚಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಅಗತ್ಯವಿರುವ ಕಾನೂನು ಅಥವಾ ವೈದ್ಯಕೀಯ ನೆರವು ಸೇರಿದಂತೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯವನ್ನು ಮುಂದುವರಿಸುತ್ತೇವೆ. ನಿಮಗೆ ಮತ್ತಷ್ಟು ನೆರವು ಬೇಕಾದರೂ ನಾವು ಲಭ್ಯವಿರುತ್ತೇವೆ,” ಎಂದು Rapido ತಿಳಿಸಿದೆ.
ಚಾಲಕ ಶಾಶ್ವತ ಅಮಾನತು
ಅಂತೆಯೇ ಆರೋಪಿ ಚಾಲಕನನ್ನು ಪ್ಲಾಟ್‌ಫಾರ್ಮ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಿದ್ದು, ಕಾನೂನು ಕ್ರಮಕ್ಕೆ ಅನುಕೂಲವಾಗುವಂತೆ ಆತನ ವಿವರಗಳನ್ನು ಆಯೇಷಾಗೆ ನೀಡಿರುವುದಾಗಿ ತಿಳಿಸಿದೆ. ಅಗತ್ಯವಿದ್ದರೆ ವೈದ್ಯಕೀಯ ಮತ್ತು ಕಾನೂನು ನೆರವು ನೀಡುವುದಾಗಿಯೂ ಕಂಪನಿ ಹೇಳಿದೆ.
ಘಟನೆ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ದೂರುಗಳಿಗೆ ತ್ವರಿತ ಸ್ಪಂದನೆಯ ಅಗತ್ಯದ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.