

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಸುತ್ತಲಿನ ರಾಜಕೀಯ ವಿವಾದ ಮುಂದುವರೆದಿದೆ. ರಾಷ್ಟ್ರೀಯ ಗೀತೆಯನ್ನು ಗೌರವಿಸುತ್ತೇನೆ. ಅದಕ್ಕಾಗಿ ಎದ್ದು ನಿಲ್ಲುತ್ತೇನೆ. ಆದರೆ ಹಾಡುವುದಿಲ್ಲ ಎಂದು ಹೇಳಿದರು. ಅದಕ್ಕೆ ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕಾರಣವೆಂದು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುತ್ತುವರೆದಿರುವ 'ವಂದೇ ಮಾತರಂ' ವಿವಾದವು ರಾಜಕೀಯ ವಿಷಯವಾಗಿ ಮಾರ್ಪಟ್ಟಿರುವ ಸಮಯದಲ್ಲಿ ಇಮ್ರಾನ್ ಮಸೂದ್ ಹೇಳಿಕೆ ನೀಡಿದ್ದಾರೆ.
ನಾನು ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ. ಈ ಹಕ್ಕನ್ನು ಸಂವಿಧಾನವು ನನಗೆ ನೀಡಿದೆ. ಯಾರೂ ಅದನ್ನು ನನ್ನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ನಾನು 'ವಂದೇ ಮಾತರಂ'ಗೆ ಅಗೌರವ ತೋರಿಸುವುದಿಲ್ಲ. ನಾನು ಅದನ್ನು ಹಾಡುವುದಿಲ್ಲ, ಆದರೆ ನಾನು ಖಂಡಿತವಾಗಿಯೂ ಅದರ ಗೌರವಾರ್ಥವಾಗಿ ಎದ್ದು ನಿಲ್ಲುತ್ತೇನೆ. ತಾನು ಇದುವರೆಗೂ 'ವಂದೇ ಮಾತರಂ' ಹಾಡಿಲ್ಲ. ಭವಿಷ್ಯದಲ್ಲಿ ಹಾಡುವುದಿಲ್ಲ ಎಂದು ಹೇಳಿದರು.
ನೀವು 'ವಂದೇ ಮಾತರಂ' ಅನ್ನು ಪ್ರಚಾರ ಮಾಡಬಹುದು. ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು ಸೂಕ್ತವೆಂದು ಭಾವಿಸುವಷ್ಟು ಮಾಡುತ್ತೇನೆ. ಮೊದಲು, 'ವಂದೇ ಮಾತರಂ'ನ ಸಂಪೂರ್ಣ ಇತಿಹಾಸವನ್ನು ಓದಿ. ಅದನ್ನು ಯಾವ ಉದ್ದೇಶದಿಂದ ಬರೆಯಲಾಗಿದೆ, ಏಕೆ ಬರೆಯಲಾಗಿದೆ ಮತ್ತು ಅದರ ಹಿನ್ನೆಲೆ ಏನು ಎಂದು ತಿಳಿದು ನಂತರ ಈ ವಿಷಯವನ್ನು ಚರ್ಚಿಸಿ ಎಂದು ಮಸೂದ್ ಹೇಳಿದರು.
ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದ್ದ ಅಮಿತ್ ಶಾ
ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ 'ವಂದೇ ಮಾತರಂ' ಅನ್ನು ಅವಮಾನಿಸಿದೆ ಎಂದು ಆರೋಪಿಸಿದ್ದರು. ಸ್ವಾತಂತ್ರ್ಯ ದಿನದಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 'ವಂದೇ ಮಾತರಂ' ಹಾಡುವ ಸಂದರ್ಭದಲ್ಲಿ, ಸೋನಿಯಾ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಹಾಡುವುದನ್ನು ನಿಲ್ಲಿಸುವಂತೆ ಸೂಚಿಸಿದರು ಎಂದು ಶಾ ಹೇಳಿಕೊಂಡಿದ್ದಾರೆ. ದೇಶದ ಜನರು ಈ ಘಟನೆಯನ್ನು ನೋಡುತ್ತಿದ್ದು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.
ಸೋನಿಯಾ ಗಾಂಧಿ ಸ್ಪಷ್ಟೀಕರಣ
ಆದಾಗ್ಯೂ, ಕಾಂಗ್ರೆಸ್ ಈ ಆರೋಪಗಳನ್ನು ತಿರಸ್ಕರಿಸಿದೆ. ವಂದೇ ಮಾತರಂ ಹಾಡುವುದನ್ನು ನಿಲ್ಲಿಸಲು ತಾನು ಯಾವುದೇ ಸೂಚನೆ ನೀಡಿಲ್ಲ ಎಂದು ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಸಮಯದಿಂದ ನಿಂತಿದ್ದರಿಂದ ಅವರಿಗೆ ಕುರ್ಚಿ ನೀಡುವಂತೆ ಅವರು ಸೂಚಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ವರ್ಷದ ಸ್ವಾತಂತ್ರ್ಯ ದಿನದಂದು 'ವಂದೇ ಮಾತರಂ' ನ ಪೂರ್ಣ ಆವೃತ್ತಿಯನ್ನು ಔಪಚಾರಿಕವಾಗಿ ಹಾಡಲಾಯಿತು. ಇದು ರಾಜಕೀಯ ಚರ್ಚೆಗೆ ಕಾರಣವಾಯಿತು ಎಂಬುದು ಗಮನಾರ್ಹ.